ಚಳಿಗಾಲ ಕಳೆದಿದೆ. ಮುಂದಿನ ದಿನಗಳಲ್ಲಿ ಬಿರು ಬೇಸಿಗೆ ಎದುರಾಗಲಿವೆ. ಬೆಸಿಗೆಯ ಬಿಸಿಲಲ್ಲಿ ಏನನ್ನೂ ತಿನ್ನಲು ಮನಸಾಗುವುದಿಲ್ಲ. ಹಾಗಂತ ಉಪವಾಸ ಕೂಡ ಇರಲಾಗುವುದಿಲ್ಲ. ಹೀಗಾಗಿ ವಾತಾವರಣಕ್ಕೆ ತಕ್ಕಂತೆ ನಾವು ಕೂಡ ಕೆಲವೊಂದು ಆಹಾರ ಕ್ರಮಗಳನ್ನು ರೂಢಿಸಿಕೊಳ್ಳುವುದು ಅಗತ್ಯ.
ಮುಂಜಾನೆ ಸ್ವಲ್ಪ ತಂಪಾಗಿರುತ್ತದೆ. ಮಧ್ಯಾಹ್ನದ ವೇಳೆಗೆ ಸೆಖೆ ಕಾಣಿಸಿಕೊಂಡು ಮೈಯೆಲ್ಲ ಉರಿಯಲು ಆರಂಭಿಸುತ್ತದೆ. ಆಗಿಂದಾಗ್ಗೆ ಬಾಯಾರಿಕೆ ನಮ್ಮನ್ನು ಕಾಡುತ್ತದೆ. ಎಷ್ಟು ನೀರು ಕುಡಿದರೂ ಮತ್ತೆ ಬೇಕೆನಿಸುತ್ತದೆ. ಶರೀರದಲ್ಲಿ ಉಷ್ಣದ ಅಂಶ ಹೆಚ್ಚುತ್ತದೆ. ಇದು ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ.
ಬಿಸಿಲಿನ ತಾಪ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ಹಣ್ಣು-ತರಕಾರಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಇವು ದೇಹದ ಉಷ್ಣತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತವೆ. ಹಣ್ಣು ತರಕಾರಿಗಳಲ್ಲಿರುವ ವಿಟಮಿನ್ ಗಳಂತಹ ಪೌಷ್ಠಿಕ ಪದಾರ್ಥಗಳು ಶರೀರಕ್ಕೆ ಪೋಷಕ ಶಕ್ತಿಯನ್ನು ನೀಡುತ್ತವೆ. ನಮ್ಮ ಆಹಾರದೊಂದಿಗೆ ಕನಿಷ್ಠ ಒಂದು ರೀತಿಯ ಹಣ್ಣನ್ನಾದರೂ ಸೇವಿಸುವುದು ಒಳ್ಳೆಯದು.
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ. ಏಕೆಂದರೆ ಈ ಹಣ್ಣು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಹೇರಳವಾದ ಲವಣಗಳು ಹಾಗೂ ವಿಟಮಿನ್ ಗಳಿವೆ. ಅಷ್ಟೇ ಅಲ್ಲ ದ್ರವ ಪದಾರ್ಥವೂ ಇದೆ. ಹಾಗೆಯೇ ಸೌತೇಕಾಯಿ, ಬಾಳೆಹಣ್ಣು. ತಾಜಾ ಸೊಪ್ಪು, ಹಸಿಬಟಾಣಿ, ಆಲೂಗೆಡ್ಡೆ, ಟೊಮೇಟೋದೊಂದಿಗೆ ಕೂಡಿದ ಸಲಾಡ್ ಶರೀರಕ್ಕೆ ಆರೋಗ್ಯ ನೀಡುತ್ತದೆ.
ಆರೋಗ್ಯವನ್ನು ವೃದ್ಧಿಸುವ ಪೌಷ್ಠಿಕಾಂಶಗಳು ಹಣ್ಣು, ತರಕಾರಿಯಲ್ಲಿವೆ. ಇವು ಶರೀರದೊಳಗೆ ಸೇರಿರುವ ವಿಷಪದಾರ್ಥಗಳನ್ನು ಹೊರ ಹಾಕುತ್ತವೆ. ಹೀಗಾಗಿ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿ ತರಕಾರಿ ಹಣ್ಣು ಸೇವಿಸಬೇಕು.