ಮಹಿಳೆಯರಿಗೆ ಗರ್ಭ ನಿರೋಧಕ ಔಷಧಿಗಳಿವೆ. ಆದರೆ ಪುರುಷರಿಗೆ ಯಾಕಿಲ್ಲ? ಎಂದು ಕೇಳುವವರು ಈ ಸುದ್ದಿಯನ್ನೊಮ್ಮೆ ಓದಿ.
ಪುರುಷರಿಗೂ ಗರ್ಭ ನಿರೋಧಕ ಔಷಧಿಗಳು ತಯಾರಾಗುತ್ತಿದ್ದು 2018ರ ವೇಳೆಗೆ ಈ ಔಷಧಿಗಳು ಮಾರುಕಟ್ಟೆಗೆ ಬರಲಿವೆ.
ಅಂದ ಹಾಗೆ ಸೀಟೆಲ್ನ ವಾಷಿಂಗ್ಟನ್ ಯುನಿವರ್ಸಿಟಿಯಲ್ಲಿ ಈ ಔಷಧಿ ಬಗ್ಗೆ ಪ್ರಯೋಗಗಳು ನಡೆದು ಬರುತ್ತಿವೆ.
ಇಲ್ಲಿಯವರೆಗೆ ಪುರುಷರ ಗರ್ಭ ನಿರೋಧಕ್ಕಾಗಿ ಕಾಂಡೋಮ್ ಬಳಕೆ , ವಾಸಕ್ಟಮಿ ಮಾಡಲಾಗುತ್ತಿತ್ತು. ಆದರೆ 2018ರ ವೇಳೆಗೆ ಪುರುಷರಿಗಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ತಯಾರಿಸಲಾಗುವುದು ಎಂದು ತಜ್ಞರು ಹೇಳಿದ್ದಾರೆ.
ಪುರುಷರಿಗಾಗಿ ಗರ್ಭ ನಿರೋಧಕ ಔಷಧಿ ತಯಾರಿಸುವುದು ಕಷ್ಟ
ಪುರುಷ ಶರೀರ ತುಂಬಾ ಸಂಕೀರ್ಣವಾಗಿದೆ. ಮಹಿಳೆಯರ ದೇಹದಲ್ಲಿ ತಿಂಗಳಿಗೆ ಒಂದು ಬಾರಿ ಅಂಡೋತ್ಪತ್ತಿಯಾದರೆ ಪುರುಷ ದೇಹದಲ್ಲಿ ನಿರಂತರವಾಗಿ ಈ ಕ್ರಿಯೆ ನಡೆಯುತ್ತಲೇ ಇರುತ್ತದೆ. ಒಂದು ಸೆಕೆಂಡ್ ನಲ್ಲಿ ಪುರುಷ ದೇಹವು 1,000 ವೀರ್ಯಗಳನ್ನು (ಅದಕ್ಕಿಂತಲೂ ಹೆಚ್ಚು) ಉತ್ಪಾದಿಸುತ್ತಿದ್ದು, ಆ ವೀರ್ಯಗಳು ಸ್ತ್ರೀ ಅಂಡಾಣುಗಳನ್ನು ಸೇರದಂತೆ ನಿಯಂತ್ರಿಸುವುದು ಕಷ್ಟ. ಈ ವೀರ್ಯಗಳ ಸಂಚಾರವನ್ನು ತಡೆಯುವುದು ಕಷ್ಟವಾಗಿರುವ ಕಾರಣ, ಗರ್ಭ ಧರಿಸಲು ಬೇಕಾಗಿರುವ ವೀರ್ಯಗಳ ಸಂಖ್ಯೆಯನ್ನು ಕುಂಠಿತಗೊಳಿಸುವ ಕ್ರಿಯೆಯನ್ನಷ್ಟೇ ಈ ಔಷಧಿಗಳ ಮೂಲಕ ಮಾಡಬಹುದು.
ಇದಲ್ಲದೆ ಈ ಔಷಧಿಯ ಅಡ್ಡ ಪರಿಣಾಮಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. 2011ರಲ್ಲಿ ಈ ಔಷಧಿಗಳ ಬಗ್ಗೆ ಪರೀಕ್ಷೆ ನಡೆಸಿದಾಗ ಖಿನ್ನತೆ, ಮೂಡ್ ಬದಲಾವಣೆ ಮೊದಲಾದ ಅಡ್ಡ ಪರಿಣಾಮಗಳು ಕಂಡು ಬಂದಿತ್ತು ಎಂದು ಮಾರಾ ರೋತ್ (ಎಂ.ಡಿ. ಎಂಡೋಕ್ರಿನಾಲಜಿಸ್ಟ್ ) ಹೇಳಿದ್ದಾರೆ.
ಹಲವಾರು ಪ್ರಯೋಗಗಳ ನಂತರ ತಜ್ಞರು ಇದೀಗ ವಾಸಲ್ಜೆಲ್ ಎಂಬ ಔಷಧಿಯೊಂದನ್ನು ತಯಾರಿಸಿದ್ದಾರೆ. ಸ್ಟೈರೆನಾಲ್ಟ್ ಮಾಲೆಕ್ ಆ್ಯಸಿಡ್ ಮತ್ತು ಡಿಮಿಥೈಲ್ ಸಲ್ಫೋಕ್ಸೈಡ್ನ (styrene-alt-maleic acid (SMA) - dimethyl sulfoxide) ಮಿಶ್ರಣವಾಗಿದೆ ಇದು. ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ
ಈ ಜೆಲ್ ಗರ್ಭ ನಿರೋಧಕವಾಗಿ ಕಾರ್ಯವೆಸಗಲಿದೆ. ಹೈಡ್ರೋಜೆಲ್ ಗುಣವಿರುವ ಈ ಜೆಲ್ ನ ಒಂದೇ ಒಂದು ಇಂಜೆಕ್ಷನ್ ತೆಗೆದುಕೊಂಡರೆ ಸಾಕು, ಗರ್ಭ ಧರಿಸುವ ಪ್ರಕ್ರಿಯೆಯನ್ನು ಇದು ತಡೆಗಟ್ಟುತ್ತದೆ.
ಈ ಔಷಧಿಯನ್ನು ಮೊಲಗಳ ಮೇಲೆ ಪ್ರಯೋಗ ಮಾಡಿದ್ದು ಒಂದು ಬಾರಿ ವಾಸಲ್ಜೆಲ್ ಇಂಜೆಕ್ಷನ್ ತೆಗೆದುಕೊಂಡರೆ ಅದು 12 ತಿಂಗಳುಗಳ ಕಾಲ ಗರ್ಭ ನಿರೋಧಕವಾಗಿ ಕಾರ್ಯವೆಸಗುತ್ತದೆ ಎಂದು ಚಿಕಾಗೋದ ಇಲಿನಾಯಿಸ್ ವಿಶ್ವ ವಿದ್ಯಾನಿಲಯದ ಪ್ರೊಫೆಸರ್ ಡೊಲಾಲ್ಡ್ ವಾಲರ್ ಹೇಳಿದ್ದಾರೆ.
ವಾಸಲ್ಜೆಲ್ನ ಸಂಶೋಧನೆಯ ಬಗ್ಗೆ ಬೇಸಿಕ್ ಆ್ಯಂಡ್ ಕ್ಲಿನಿಕಲ್ ಆಂಡ್ರಾಲಜಿ ಜರ್ನಲ್ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos