ಹಳೆಗನ್ನಡದ ಶಕ್ತಿ ಬೇರಾವ ಭಾಷೆಗಿಲ್ಲ: ಕುಂವೀ
ಮುಂಬೈ: ಪಂಪ, ರನ್ನ, ಕುಮಾರವ್ಯಾಸ ಇವರೆಲ್ಲ ಹಳೆಗನ್ನಡ ಸಾಹಿತ್ಯದ ದೊಡ್ಡ ಶಕ್ತಿಗಳು. ಈಗಿನ ಪೀಳಿಗೆ ಹಳೆಗನ್ನಡ ಸಾಹಿತ್ಯವನ್ನು ಓದುತ್ತಿಲ್ಲ. ಹಳೆಗನ್ನಡ ಕಾವ್ಯಕ್ಕೆ ಇರುವ ಶಕ್ತಿ ಬಹುಶಃ ಭಾರತದ ಬೇರೆ ಯಾವ ಭಾಷೆಗಳಲ್ಲೂ ಇಲ್ಲ. ಹಳೆಗನ್ನಡ ಸಾಹಿತ್ಯ ಗಮನಿಸದಿದ್ದರೆ ಹೊಸಗನ್ನಡ ಭಾಷೆಗೆ ಶಕ್ತಿ ಇರೊಲ್ಲ ಎಂದು ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದಾರೆ.
ಅವರು ಕರ್ನಾಟಕ ಸಂಘ, ಮುಂಬಯಿ ಇದರ 'ಸಾಹಿತ್ಯ ಭಾರತಿ'ಯ ತಿಂಗಳ ಸಾಹಿತ್ಯ ಚಿಂತನ-ಸರಣಿ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ವಿಶೇಷ ಉಪನ್ಯಾಸವನ್ನು ನೀಡಿದರು. ಕುಂ.ವೀ ಅವರು ತಾನು 19ನೇ ವರ್ಷದಲ್ಲಿ ಕಥೆ ಬರೆದುದನ್ನು ನೆನಪಿಸುತ್ತಾ ನಾನು ಅಂದು ಹಳೆಗನ್ನಡ ಓದುತ್ತಾ ಇದ್ದುದರಿಂದಲೇ ಬರೆಯಲು ಸಾಧ್ಯವಾಯಿತು. ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲೂ ಅಪೂರ್ವ ಕೊಡುಗೆ ನೀಡಿದೆ. 1973-75ರ ನಡುವಿನ ಕರ್ನಾಟಕದ ಚಳವಳಿಗಳು ಅಂದಿನ ಆಡಳಿತದ ವಿರುದ್ಧ ಬರೆದ ಕವಿತೆಗಳನ್ನು ನೆನಪಿಸಿದ ಕುಂ.ವೀ. ಅವರು ಶೂದ್ರ ದಲಿತರಿಗೆ ಶಿಕ್ಷಣ ದೊರೆತ ನಂತರದ ಸಾಹಿತ್ಯದ ಬೆಳವಣಿಗೆಗಳನ್ನು ಗುರುತಿಸಿದರು.
ನನಗೆ ಬರಹ ಅಂದರೆ ಧ್ಯಾನ. ಓದು ಎಂದರೆ ವ್ಯಾಯಾಮ. ಈ ಧ್ಯಾನ ಮತ್ತು ವ್ಯಾಯಾಮ ಇದ್ದರೆ ಯಾವ ರೋಗವೂ ಬರುವುದಿಲ್ಲ ಎಂದ ಅವರು ಆಧುನಿಕ ತಂತ್ರಜ್ಞಾನದ ಬಗ್ಗೆ ತಿಳಿಸುತ್ತಾ ಪತ್ರಿಕೆಗಳಿಗೆ ಇಂದು ನೀಳ್ಗತೆ ಬೇಕಾಗಿಲ್ಲ. ಅವರು ಶಬ್ದಗಳ ಮಿತಿ ಹಾಕುತ್ತಿದ್ದಾರೆ. ಹಾಗಾಗಿ ನಾನು ಇಂಟರ್ನೆಟ್ ಪತ್ರಿಕೆಗಳಿಗೆ ಬರೆದು ಇಮೇಲ್ ಮಾಡುವುದನ್ನೂ ಅಭ್ಯಾಸ ಮಾಡಿಕೊಂಡಿದ್ದೇನೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರಕಾಶ್ ಜಿ. ಬುರ್ಡೇಯವರು ಸ್ವಾಗತಿಸಿ ಪ್ರಸ್ತಾವನೆ ಮಾಡಿ ಕುಂ.ವೀ ಅವರಿಗೆ ಸನ್ಮಾನಿಸಿದರು. ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ನಿರೂಪಿಸಿ ವಂದಿಸಿದರು. ಉಪಾಧ್ಯಕ್ಷ ಭರತ್ಕುಮಾರ್ ಪೊಲಿಪು ವೇದಿಕೆಯಲ್ಲಿದ್ದರು.