ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

ಪಾಂಡುರಂಗರಾವ್‌ಗೆ ಕೊರಿಯಾ ಅಂತಾರಾಷ್ಟ್ರೀಯ ಗರಿ

Lingaraj Badiger
Updated On : 21 Jan 2013, 1:54 am

ಸಿಯೋಲ್: ಕಳೆದ ಡಿಸೆಂಬರ್‌ನಲ್ಲಿ ಕೊರಿಯಾದ ಸಿಯೋಲ್‌ನಲ್ಲಿ ಏರ್ಪಡಿಸಿದ 21ನೇ ಡೇಜಾನ್ ಅಂತಾರಾಷ್ಟ್ರೀಯ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಖ್ಯಾತ ವ್ಯಂಗ್ಯ ಚಿತ್ರಕಾರ ಬಿ.ವಿ. ಪಾಂಡುರಂಗರಾವ್ ಅವರು ನಗರ ಪರಿಸರ ಮಾಲಿನ್ಯ ಕುರಿತು ರಚಿಸಿದ ಎರಡು ವ್ಯಂಗ್ಯ ಚಿತ್ರಗಳು ಆಯ್ಕೆಯಾಗಿದ್ದು, ವಿಶಿಷ್ಟ ಬಹುಮಾನ ಥೀಮ್ ಪ್ರೈಜ್ ದೊರಕಿದೆ.
ಇವರಿಗೆ ಪ್ರಮಾಣ ಪತ್ರ ನೀಡುವುದರೊಂದಿಗೆ ಆಯ್ಕೆಯಾದ ಕೃತಿಗಳನ್ನು ಆಯೋಜಕರು ಹೊರತಂದಿದ್ದು, 300 ವ್ಯಂಗ್ಯ ಚಿತ್ರ ಸಂಕಲನದಲ್ಲಿ ಇವರ ಕೃತಿಗಳನ್ನು ಪ್ರಕಟಿಸಲಾಗಿದೆ. ಈ ಸ್ಪರ್ಧೆಯಲ್ಲಿ 57 ದೇಶಗಳಿಂದ 507 ವ್ಯಂಗ್ಯ ಚಿತ್ರಕಾರರು 1408 ಕೃತಿಗಳೊಂದಿಗೆ ಭಾಗವಹಿಸಿದ್ದರು. 16 ವರ್ಷಗಳಿಂದ ಈ ಸ್ಪರ್ಧೆಯಲ್ಲಿ ಪ್ರತಿ ವರ್ಷವೂ ಭಾಗವಹಿಸುತ್ತಿರುವ ಪಾಂಡುರಂಗರಾವ್ ಅವರಿಗೆ ಈ ಸ್ಪರ್ಧೆಯಲ್ಲಿ ನೀಡುವ 5ನೇ ಬಹುಮಾನ, ಉತ್ಕೃಷ್ಟ ಬಹುಮಾನ, ಗೌರವ ಪ್ರಶಸ್ತಿ ಹಾಗೂ ಥೀಮ್ ಪ್ರೈಜ್ ಒಳಗೊಂಡು ಒಟ್ಟು 13 ಬಾರಿ ಪ್ರಶಸ್ತಿಯನ್ನು ಪಡೆದು ಲಿಮ್ಕಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ವಿವಿಧ ದೇಶಗಳು ಏರ್ಪಡಿಸಿದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯ ವ್ಯಂಗ್ಯ ಚಿತ್ರ ಪ್ರದರ್ಶನಗಳಲ್ಲಿ ಪಾಂಡುರಂಗರಾವ್ ಅವರ ಕೃತಿಗಳು ಒಟ್ಟು 37 ಬಾರಿ ಆಯ್ಕೆಯಾಗಿದ್ದು, 31 ಬಾರಿ ವ್ಯಂಗ್ಯಚಿತ್ರ ಸಂಕಲನದಲ್ಲಿ ಸೇರಿಸಲಾಗಿದೆ. ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳು, ಹೆಚ್ಚು ಏಕ ವ್ಯಕ್ತಿ ವ್ಯಂಗ್ಯ ಚಿತ್ರ ಪ್ರದರ್ಶನಗಳು, ಅತಿ ಸಣ್ಣ ಫ್ಲಿಪ್ ಬುಕ್, ಅತಿ ದೊಡ್ಡ ಫ್ಲಿಪ್ ಬುಕ್, ಅತಿ ಸಣ್ಣ ದೆಸ್ಕ್ ಕ್ಯಾಲೆಂಡರ್ 2012ನ್ನು ರಚಿಸಿ ಇವರು ಈಗಾಗಲೇ ನಾಲ್ಕು ಬಾರಿ ಲಿಮ್ಕಾ ಮತ್ತು 4 ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ, ವರ್ಲ್ಡ್ ಅಮೇಜಿಂಗ್ ರೆಕಾರ್ಡ್ಸ್ ಹಾಗೂ ಯೂನಿಕ್ ವರ್ಲ್ಡ್ ರೆಕಾರ್ಡ್ಸ್ ಮತ್ತು ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ.
ನವದೆಹಲಿಯಲ್ಲಿ ಏರ್ಪಡಿಸಿದ್ದ ಕಾರ್ಟೂನ್ ಉತ್ಸವ-2011ದಲ್ಲಿ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ಪಾಂಡುರಂಗರಾವ್ ಅವರನ್ನು ಜೀವಮಾನ ಸಾಧನೆ ಪ್ರಶಸ್ತಿಯಿಂದ ಸನ್ಮಾನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement