ಮಸ್ಕತ್ನಲ್ಲಿ ಸಂಭ್ರಮದ ಬಸವ ಜಯಂತಿ ಆಚರಣೆ
ಬಸವ ಬಳಗವು ಇಲ್ಲಿಯ ಅಲ್ ರೆಹಾಬ್ ಹೋಟೆಲ್ ಸಭಾಂಗಣದಲ್ಲಿ ಸಂಭ್ರಮದಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಮಾರಂಭದ...
ಮಸ್ಕತ್: ಬಸವ ಬಳಗವು ಇಲ್ಲಿಯ ಅಲ್ ರೆಹಾಬ್ ಹೋಟೆಲ್ ಸಭಾಂಗಣದಲ್ಲಿ ಸಂಭ್ರಮದಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಮಾರಂಭದ ಸಾನ್ನಿಧ್ಯವನ್ನು ಬೆಂಗಳೂರಿನ ವಿಭೂತಿಪುರಮಠದ ಷ.ಭ್ರ. ಡಾ. ಮಹಾಂತಲಿಂಗ ಶಿವಾಚಾರ್ಯರು ವಹಿಸಿ ಆಶೀರ್ವಚನ ನೀಡಿದರು. ಬಸವ ತತ್ವ ಮತ್ತು ಬದುಕಿನ ಮೌಲ್ಯಗಳ ಬಗ್ಗೆ ಅತ್ಯಂತ ಸರಳ ಭಾಷೆಯಲ್ಲಿ ಮನಮುಟ್ಟುವಂತೆ ತಿಳಿಸಿದರು.
ಅರವಿಂದ ಪಾಟೀಲ (ಕತಾರ್) ಇವರಿಗೆ ವಿದೇಶದಲ್ಲಿ ನಾಡು ನುಡಿ ಸಂಸ್ಕೃತಿ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಬಸವಕಿರಣ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಸವ ಬಳಗದ ಅಧ್ಯಕ್ಷರಾದ ಅನಿಲ್ ಭಾಸಗಿಯವರು ಬಸವ ಬಳಗ ಮಸ್ಕತ್ ನಡೆದು ಬಂದ ದಾರಿ ಮತ್ತು ಧ್ಯೇಯೋದ್ದೇಶಗಳ ಕಿರು ಪರಿಚಯ ನೀಡಿದರು. ಕರ್ನಾಟಕದ ಖ್ಯಾತ ಜನಪದ ಗಾಯಕರಾದ ಗೋನಾಸ್ವಾಮಿ ಮತ್ತು ತಂಡದವರಿಂದ ವಚನ ಗಾಯನ ಮತ್ತು ತತ್ವ ಪದಗಳ ಗಾಯನದ ರಸದೌತಣ ಎಲ್ಲರನ್ನೂ ರಂಜಿಸಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿ ಕಲಾವಿದರಿಗೆ ಮತ್ತು ಮಕ್ಕಳಿಗೆ ಶ್ರೀಗಳ ಅಮೃತ ಹಸ್ತದಿಂದ ಸ್ಮರಣಿಕೆ ವಿತರಿಸಲಾಯಿತು. ಬಸವ ಬಳಗ ಮಸ್ಕತ್ನಡೆಸಿಕೊಡುವ ಪ್ರತಿ ತಿಂಗಳ ಮಹಾಮನೆ ಕಾರ್ಯಕ್ರಮದಲ್ಲಿ ಸಹಕರಿಸುತ್ತಿರುವ ಶಿವರುದ್ರ ಮಠಪತಿಯನ್ನು ಹಾಗೂ ಸ್ಥಳೀಯ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅನಿಲ್ ಭಾಸಗಿ, ಖಜಾಂಚಿಯಾಗಿ ಆಯ್ಕೆಯಾಗಿರುವ ರಾಜು ಕಾಗಿ ಮತ್ತು ಸಮಿತಿ ಸದಸ್ಯರಾಗಿ ಆಯ್ಕೆಯಾದ ಶಿವಶಂಕರ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ್ ಪಿ. ಉಪಸ್ಥಿತರಿದ್ದರು. ಶ್ರೀಗಳ ಮತ್ತು ಅತಿಥಿ ಕಲಾವಿದರ ಕಿರುಪರಿಚಯವನ್ನು ಕುಮಾರ್. ಶಿಶಿರ್ ನಾಗರಾಜ್ ನಡೆಸಿಕೊಟ್ಟರು.
ಎಲ್ಲ ಸದಸ್ಯರಿಗೂ ಜಗಜ್ಯೋತಿ ಬಸವಣ್ಣನವರ ಸ್ಮರಣಿಕೆಯನ್ನು ಶ್ರೀಗಳ ಅಮೃತ ಹಸ್ತದಿಂದ ವಿತರಿಸಲಾಯಿತು ಮತ್ತು ಸಾಂಪ್ರದಾಯಿಕ ಜೋಳದ ರೊಟ್ಟಿ ಮತ್ತು ಹೋಳಿಗೆ ಊಟದ ದಾಸೋಹ ವಿಶೇಷ ಆಕರ್ಷಣೆಯಾಗಿತ್ತು. ಶಿವಪ್ರಕಾಶ್ ಸ್ವಾಗತಿಸಿದರು. ಶ್ರೀಮತಿ ಭಾರತಿ ರವೀಂದ್ರ ವಂದಿಸಿದರು.