ಗಡಿನಾಡ ಕನ್ನಡ ಗಾರುಡಿಗ ಕಿಂಞಣ್ಣ ರೈಗೆ 99ರ ಸಂಭ್ರಮ
ಕಾಸರಗೋಡು (ಕೇರಳ): ಶತಕದತ್ತ ಹೆಜ್ಜೆ ಹಾಕುತ್ತಿರುವ ಗಡಿನಾಡ ಕನ್ನಡ ಗಾರುಡಿಗ ಡಾ. ಕಯ್ಯಾರ ಕಿಂಞಣ್ಣ ರೈ ಅವರಿಗೆ ಶನಿವಾರ ಅವರ ಮನೆಯಲ್ಲಿಯೇ 99ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಬದಿಯಡ್ಕ ಪೆರಡಾಲ 'ಕವಿತಾ ಕುಟೀರ'ದಲ್ಲಿ ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ಅಭಿನಂದನೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಜನ್ಮಶತಮಾನೋತ್ಸವ ಆಚರಣೆಗೂ ಚಾಲನೆ ನೀಡಲಾಯಿತು.
'ರೈಗಳು ಕರ್ನಾಟಕ ರತ್ನ ಪಡೆಯಲು ಎಲ್ಲ ರೀತಿಯಲ್ಲಿ ಅರ್ಹತೆ ಉಳ್ಳವರು. ಇದನ್ನು ನೀಡಿ ಕೀರ್ತಿ ಗಳಿಸಲು ಕರ್ನಾಟಕ ಸರ್ಕಾರ ಕಾರ್ಯ ತತ್ಪರವಾಗಲಿದೆ' ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಕಿಂಞಣ್ಣ ರೈ ಅವರ 100ನೇ ಹುಟ್ಟುಹಬ್ಬವನ್ನು ಮಂಗಳೂರಿನ ನೆಹರು ಮೈದಾನದಲ್ಲಿ ಕರ್ನಾಟಕ ಮತ್ತು ಕೇರಳದವರು ಸೇರಿ ಆಚರಿಸೋಣ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಿತ್ತು ಎಂದರು.
ಮಾಜಿ ಶಾಸಕ ವಾಟಾಳ್ ನಾಗರಾಜ್ ಮಾತನಾಡಿ, ರೈಗಳಿಗೆ ರಾಷ್ಟ್ರಕವಿ ಪ್ರಶಸ್ತಿ ಎಂದೋ ಬರಬೇಕಿತ್ತು. ಗಡಿನಾಡಲ್ಲಿ ಕನ್ನಡ ಪರವಾಗಿ ಹೋರಾಟ ನಡೆಸುತ್ತಿರುವ ರೈಗಳ ಮಹಾನ್ ಹೋರಾಟದ ಬಗ್ಗೆ ರಾಜಕಾರಣಿಗಳಿಗೆ ಏನೂ ಗೊತ್ತಿಲ್ಲ. ವಿಧಾನಸೌಧಕ್ಕೆ ಹೋಗಿ ಜನಪ್ರತಿನಿಧಿಗಳ ಬಳಿ ಕಯ್ಯಾರ ಬಗ್ಗೆ, ಪೆರಡಾಲ ಬಗ್ಗೆ, ಕಾಸರಗೋಡು ಬಗ್ಗೆ ಕೇಳಿದರೆ ನೂರಕ್ಕೆ 99 ಮಂದಿಗೆ ಗೊತ್ತಿರುವುದಿಲ್ಲ ಎಂದು ಟೀಕಿಸಿದರು.
ಉದಯವಾಣಿ ಬ್ಯೂರೋ ಚೀಫ್ ಮನೋಹರ ಪ್ರಸಾದ್ ಅಭಿನಂದಿಸಿ ಮಾತನಾಡಿದರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಸುಬ್ಬಯ್ಯ ರೈ, ಪತ್ರಕರ್ತ ಮಲಾರು ಜಯರಾಮ ರೈ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸರ್ಕಾರದಿಂದ ಜನ್ಮಶತಮಾನೋತ್ಸವ ಆಚರಣೆ: ಶನಿವಾರ ಸಂಜೆ ಕಯ್ಯಾರರನ್ನು ಅಭಿನಂದಿಸಿ ಮಾತನಾಡಿದ ಅರಣ್ಯ ಸಚಿವ ಬಿ. ರಮಾನಾಥ ರೈ, ಸರ್ಕಾರ ರಚನೆಯಾಗಿ ಇಷ್ಟು ಕಡಿಮೆ ಅವಧಿಯಲ್ಲಿ ಕನ್ನಡದ ಒಂದು ಭಾಗವಾದ ಕಾಸರಗೋಡಿಗೆ ಬರಲು ಅವಕಾಶ ಲಭಿಸಿದೆ. ಕಯ್ಯಾರ ಜನ್ಮದಿನ ಸಂಭ್ರಮದಲ್ಲಿ ಭಾಗವಹಿಸಿರುವುದು ಸೌಭಾಗ್ಯ. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರಿ ಜತೆ ಮಾತನಾಡಿ, ಕಯ್ಯಾರ ಜನ್ಮಶತಮಾನೋತ್ಸವವನ್ನು ಉತ್ತಮವಾಗಿ ಆಚರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.