ಕ್ರಿಯಾಶೀಲತೆ ವಿಸ್ತಾರಕ್ಕೆ ಪುಸ್ತಕಗಳಿಂದ ನೆರವು: ಡಾ. ಮೊಗಸಾಲೆ
ಮುಂಬೈ: ಸಾಂಸ್ಕೃತಿಕ ಮನಸ್ಸು, ಸಾಂಸ್ಕೃತಿಕ ವಿಚಾರಗಳು ನಮ್ಮಲ್ಲಿದ್ದರೆ ಅಂತಹ ಸಾಂಸ್ಕೃತಿಕ ಲೋಕದಿಂದ ಶಾಂತಿ ನೆಮ್ಮದಿಯ ಜೀವನವನ್ನು ನೀಡಲು ಸಾಧ್ಯವಾಗುತ್ತದೆ. ಇಂದಿನ ತಲ್ಲಣ ಬದುಕಿನ ನಡುವೆ ಪುಸ್ತಕಗಳ ಓದಿನಿಂದ ನಮ್ಮ ಕ್ರಿಯಾಶೀಲತೆಗೆ ಇನ್ನಷ್ಟು ನೆರವು ಸಿಗುತ್ತದೆ. ಈ ಕ್ರಿಯಾಶೀಲತೆ ಎಲ್ಲಾ ಕ್ಷೇತ್ರಗಳ ಜನರಲ್ಲೂ ಇರುತ್ತದೆ. ಕ್ರಿಯಾಶೀಲತೆ ಇರುವವರೆಗೆ ನಮ್ಮಲ್ಲಿ ಚಿಂತೆ ಎನ್ನುವುದು ಒಳಸೇರಲಾರದು ಎಂದು ಹೆಸರಾಂತ ಸಾಹಿತಿ, ಕವಿ ಡಾ. ನಾ. ಮೊಗಸಾಲೆ ಹೇಳಿದ್ದಾರೆ.
ಕರ್ನಾಟಕ ಸಂಘ ಮುಂಬಯಿ ಆಶ್ರಯದಲ್ಲಿ ಶ್ರೀನಿವಾಸ ಪುಸ್ತಕ ಪ್ರಕಾಶನ ಮತ್ತು ಕೌಸ್ತುಭ ಪ್ರಕಾಶನ, ಬೆಂಗಳೂರು ಇವರ ಸಹಕಾರದಲ್ಲಿ ಮಾರ್ಚ್ 9ರಂದು ಸಂಘದ ಸಮರಸ ಭವನದಲ್ಲಿ ಜರುಗಿದ ಶ್ರೀನಿವಾಸ ಜೋಕಟ್ಟೆಯವರ "ಮುಂಬಯಿ ಅಂಡರ್‌ವರ್ಲ್ಡ್ ಮತ್ತು ಡಾ. ಜಿ.ಡಿ. ಜೋಶಿ ಅವರ "ಕನ್ನಡ ಕುಲರಸಿಕರು" ಎಂಬ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜೋಕಟ್ಟೆಯವರ ಮುಂಬಯಿ ಅಂಡರ್ ವರ್ಲ್ಡ್ ಮೇಲ್ನೋಟಕ್ಕೆ ಇಂತಹ ಕೃತಿಗಳ ಅಗತ್ಯವೇನು? ಇದು ಸಾಹಿತ್ಯ ಕೃತಿಯ ಸಾಲಿಗೆ ಸೇರುವುದೇ? ಎಂಬ ಪ್ರಶ್ನೆ ಸಹಜವಾಗಿ ಎದುರಾಗಬಹುದು. ಆದರೆ ಇಂತಹ ಕೃತಿಗಳಿಗೂ ಸಾಹಿತ್ಯಿಕ ಮೌಲ್ಯವನ್ನು ನೀಡಬೇಕಾಗುತ್ತದೆ. ಅದನ್ನು ಓದುವ ಮೂಲಕ ಇಂತಹ ಭೂಜಗತ್ತಿಗೆ ಸೇರಬಾರದು, ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎನ್ನುವ ಪ್ರೇರಣೆ ಸಿಗುತ್ತದೆ. ಈ ನಿಟ್ಟಿನಲ್ಲಿ ಪುಸ್ತಕ ಮಹತ್ವ ಪಡೆಯುತ್ತದೆ. ಅದೇ ರೀತಿ ಡಾ. ಜಿ.ಡಿ. ಜೋಶಿ ಅವರ 'ಕನ್ನಡ ಕುಲರಸಿಕರು' ಸಾಹಿತ್ಯಕ ಮಹತ್ವ ಪಡೆದಿದೆ ಎಂದರು.
ಡಾ. ಜಿ.ಡಿ. ಜೋಶಿ ಅವರ 'ಕನ್ನಡ ಕುಲರಸಿಕರು' ಕೃತಿಯನ್ನು ಉಡುಪಿಯ ಸಾಹಿತಿ ಕು. ಗೋ. (ಎಚ್. ಗೋಪಾಲಭಟ್ಟ ಬಿಡುಗಡೆ ಮಾಡಿದರು. ಶ್ರೀನಿವಾಸ ಜೋಕಟ್ಟೆಯವರ "ಮುಂಬಯಿ ಅಂಡರ್‌ವರ್ಲ್ಡ್ ಕೃತಿಯನ್ನು ಪ್ರಶಸ್ತಿ ಪುರಸ್ಕೃತ ರಂಗನಟ ಮೋಹನ್ ಮಾರ್ನಾಡ್ ಬಿಡುಗಡೆ ಮಾಡಿದರು. ಕನ್ನಡ ಕುಲರಸಿಕರು ಕೃತಿಯನ್ನು ಆಕ್ಷಯ ಸಂಪಾದಕರಾದ ಡಾ. ಈಶ್ವರ ಅಲೆವೂರು ಪರಿಚಯಿಸಿದರು. ಗೌ. ಅತಿಥಿಯಾಗಿ ಆಗಮಿಸಿದ ಕರ್ನಾಟಕ ಮಲ್ಲ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಮಾತನಾಡುತ್ತಾ ಇಲ್ಲಿನ ಹೊಸ ಬರಹಗಾರರನ್ನೂ ಕನ್ನಡದ ವಿಮರ್ಶಕರನ್ನು ಗುರುತಿಸುವಂತಾಗಬೇಕೆಂದರು. ಕೃತಿಕಾರರಾದ ಡಾ. ಜಿ.ಡಿ. ಜೋಶಿ ಮತ್ತು ಶ್ರೀನಿವಾಸ ಜೋಕಟ್ಟೆ ತಮ್ಮ ಸಾಹಿತ್ಯ ರಚನೆ ಕುರಿತಂತೆ ಮಾತನಾಡಿದರು. ಗೌ. ಕೋಶಾಧಿಕಾರಿ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿದರು. ಕವಯಿತ್ರಿ ನಿರೂಪಿಸಿ ವಂದಿಸಿದರು.