ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹೊರನಾಡು ಕನ್ನಡಿಗ

ಪಾರ್ಥಸಾರಥಿ ಶ್ರಮದಿಂದ ಡೆನ್ವರ್ನಲ್ಲಿ 'ದಾಸ ನಮನ'

ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಅನೇಕ ವರ್ಷಗಳ ಹಿಂದೆ ಬಂದು ಬಿತ್ತಿದ ಸಂಸ್ಕೃತಿ ಹಾಗೂ ಸಾಹಿತ್ಯ ಭಾಷೆಯ ಬೀಜ ಈಗ ದಟ್ಟವಾಗಿ ಬೆಳೆದಿದೆ...

Rashmi Kasaragodu
Updated On : 11 Nov 2013, 12:00 pm

ಡೆನ್ವರ್ (ಅಮೆರಿಕ): ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಅನೇಕ ವರ್ಷಗಳ ಹಿಂದೆ ಬಂದು ಬಿತ್ತಿದ ಸಂಸ್ಕೃತಿ ಹಾಗೂ ಸಾಹಿತ್ಯ ಭಾಷೆಯ ಬೀಜ ಈಗ ದಟ್ಟವಾಗಿ ಬೆಳೆದಿದೆ. ಅವರ ಪ್ರಚೋದನೆಯ ಫಲವಾಗಿ ಡೆನ್ವರ್ ನಗರದಲ್ಲಿ ಪ್ರತಿ ವರ್ಷ ಫೆಬ್ರವರಿಯಲ್ಲಿ 'ದಾಸ ನಮನ' ಎಂಬ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದು ಕೊಲರಾಡೊ ಕನ್ನಡಕೂಟದ ಅಧ್ಯಕ್ಷರಾದ ಡಾ. ಪ್ರಭಾಕರ್ರಾವ್ ಹೇಳಿದರು.
ಈಚೆಗೆ ಅಮೆರಿಕಾದ ಕೊಲರಾಡೊ ಕನ್ನಡ ಕೂಟವು ಡೆನ್ವರ್ ವೇದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂರಾರು ಮಕ್ಕಳು ಹಾಗೂ ಹಿರಿಯರು ಹರಿದಾಸರ ಹಾಡನ್ನು ಸುಶ್ರಾವ್ಯವಾಗಿ ಹೇಳುವುದನ್ನು ಕಲಿತಿದ್ದಾರೆ. ಹಾಗೆಯೇ ವಿಷ್ಣುಸಹಸ್ರನಾಮದ ಬಗ್ಗೆ ಅರಳುಮಲ್ಲಿಗೆ ಪಾರ್ಥಸಾರಥಿಯವರು ಮಾಡಿದ ಸತತ ಆಂದೋಲನದ ಫಲವಾಗಿ ಈಗ ಅಮೆರಿಕಾದ ಅನಿವಾಸಿ ಭಾರತೀಯರ ಮನೆ-ಮನಗಳಲ್ಲಿ ವಿಷ್ಣುಸಹಸ್ರ ನಾಮ ಮೊಳಗುತ್ತಿದೆ. ಹಾಗೆಯೇ ಈ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಪಟೇಲ್ ಬಸವೇಗೌಡ ಮಾತನಾಡಿ, ಅರಳುಮಲ್ಲಿಗೆಯವರು ಅಮೆರಿಕಾದಲ್ಲಿ ಮಾಡುತ್ತಿರುವ ಉಪನ್ಯಾಸಗಳ ಪ್ರಭಾವವನ್ನು ಈಗ ಇಲ್ಲಿಯ ಅನಿವಾಸಿ ಭಾರತೀಯರು ಗುರುತಿಸಿ ಕೃತಜ್ಞತಾ ಪೂರ್ವಕವಾಗಿ ಈ ಸನ್ಮಾನವನ್ನು ಮಾಡುತ್ತಿದ್ದಾರೆ ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅರಳುಮಲ್ಲಿಗೆಯವರು, ಕೊಲರಾಡೊ ಕನ್ನಡಕೂಟವು ದಶಕ-ದಶಕಗಳಿಂದ ದಾಸ ಸಾಹಿತ್ಯ ಪ್ರಸಾರಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದ ಈ ಗೌರವ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಕೊಲರಾಡೊ ಕನ್ನಡ ಕೂಟದ ಸಂಚಾಲಕ ಶಶಿಕಿರಣ್ ಕುಣಿಗಲ್ ಮಾತನಾಡಿದರು. ಮೀನಾ ಕಿಕ್ಕೇರಿ ಪ್ರಾರ್ಥಿಸಿದರು. ರಾಘವೇಂದ್ರ ಸಮೇತನಹಳ್ಳಿ ಹಾಗೂ ಹಿರಿಯರಾದ ಶಂಕರನಾರಾಯಣ ಸರಗೂರು ವೇದಘೋಷ ಮಾಡಿ ಸಮಾರಂಭಕ್ಕೆ ಚಾಲನೆ ನೀಡಿದರು. ವಿಟ್ಟಲ್ ಕೂಡುವಲ್ಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement