ಅಂತಾರಾಜ್ಯದತ್ತ 'ಸರಣಿ ಪಯಣ': ವಾಮನರಾವ್ ಬೇಕಲ್
ಕಾಸರಗೋಡು: ಕಾಸರಗೋಡು ಬಹುಭಾಷಾ ಸಂಸ್ಕೃತಿಗಳ ಸಂಗಮ ಭೂಮಿ. ಇಲ್ಲಿನ ಕಲೆ, ಸಾಹಿತ್ಯ ವಿಶ್ವವಿಖ್ಯಾತವಾಗಿದೆ. ಧಾರ್ಮಿಕ ಆಚರಣೆ, ಆರಾಧನೆಗಳಿಗೆ ಸನಾತನ ಪರಂಪರೆ ಇದೆ. ಇಲ್ಲಿನ ಸಾಂಸ್ಕೃತಿಕ ಮೌಲ್ಯಗಳನ್ನು ಹೊಸ ಜನಾಂಗಕ್ಕೆ ಪರಿಚಯಿಸುವ ಕೆಲಸ ನಡೆಯಬೇಕಾಗಿದೆ ಎಂದು ಕಾಸರಗೋಡು ನುಳ್ಳಿಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸಂಸ್ಥಾಪಕ ಹಾಗೂ ಕೋಟೆಕಣಿ ಶ್ರೀರಾಮ ಸಾಂಸ್ಕೃತಿಕ ಸಮಿತಿಯ ಸರಣಿ ಕಾರ್ಯಕ್ರಮದ ನಿರ್ದೇಶಕ ಕೆ. ವಾಮನರಾವ್ ಬೇಕಲ್ ಹೇಳಿದ್ದಾರೆ. ಸಂಘಟಕ, ರಂಗನಟ, ಕಾಸರಗೋಡಿನ ಸಾಂಸ್ಕೃತಿಕ ರಾಯಭಾರಿ ಕೆ. ಗುರುಪ್ರಸಾದ ಕೋಟೆಕಣಿ ಹಾಗೂ ಅವರ ತಂಡದ ನೇತೃತ್ವದಲ್ಲಿ ಶ್ರೀರಾಮ ಸಾಂಸ್ಕೃತಿಕ ಭವನ ಸಮಿತಿಯ ನೂತನ ಯೋಜನೆ 'ಸರಣಿ ಪಯಣ'ದ 58ನೇ ಕಾರ್ಯಕ್ರಮದಿಂದ 100ನೇ ಕಾರ್ಯಕ್ರಮವನ್ನು ಅಂತಾರಾಜ್ಯದ ವರೆಗೂ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸರಣಿ ಪಯಣದ ಸಾಂಸ್ಕೃತಿಕ ನಿಯೋಗದಲ್ಲಿ ಸಾಹಿತಿಗಳು, ಕಲಾವಿದರು, ದಾಸ ಸಂಕೀರ್ತನಕಾರರು, ಮಾಧ್ಯಮದವರು, ಕಲಾಪೋಷಕರು, ಪ್ರೋತ್ಸಾಹಕರು, ಸಂಘಟಕರು, ಕನ್ನಡ ಅಭಿಮಾನಿಗಳು ಭಾಗವಹಿಸಲಿದ್ದಾರೆ. 57 ಸರಣಿ ಕಾರ್ಯಕ್ರಮಗಳಿಗೆ ಜನತೆ ನೀಡಿದ ಪ್ರೋತ್ಸಾಹವೇ ಸರಣಿ ಪಯಣದ ಯೋಚನೆ ಮತ್ತು ಯೋಜನೆಗೆ ಸ್ಫೂರ್ತಿ, ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ.