ಶರಣ ಸಾಹಿತ್ಯ ಸಮಷ್ಟಿ ಸಂಸ್ಕೃತಿಯ ಪ್ರತಿಬಿಂಬ
ಮುಂಬಯಿ: ವಚನ ವಾಜ್ಞಯ ಆಧುನಿಕ ಸಂದರ್ಭದಲ್ಲಿಯೂ ಅತ್ಯಂತ ಪ್ರಸ್ತುತವಾದುದು. ಶರಣರು ಪ್ರತಿಬಿಂಬಿಸಿದ್ದು ಸಮಷ್ಟಿ ಸಂಸ್ಕೃತಿಯನ್ನು. ಅವರು ಜನಪದ ಸಂಸ್ಕೃತಿಯನ್ನು ಪುರಸ್ಕರಿಸಿದರು. ಸಹಜ ಬದುಕಿಗೆ ಒತ್ತು ನೀಡಿ ಜನ ಸಾಮಾನ್ಯರ ಬಾಳು ಹಸನಾಗುವಂತೆ ನೋಡಿಕೊಂಡರು ಎಂದು ಅಕ್ಕಲಕೋಟೆ ಬಸವೇಶ್ವರ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗುರುಲಿಂಗಪ್ಪ ಧಬಾಲೆ ಅವರು ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 'ವಚನ ಸಂಸ್ಕೃತಿ' ಎಂಬ ವಿಷಯದ ಕುರಿತು ಕನ್ನಡ ವಿಭಾಗದಲ್ಲಿ ಉಪನ್ಯಾಸ ನೀಡುತ್ತಾ ಅನುಭಾವಿಗಳಿಗೆಲ್ಲ ಜಗತ್ತೇ ಒಂದೇ ಆಗಿ ಕಂಡಿದೆ. ಎಲ್ಲರನ್ನು ತಮ್ಮ ತೆಕ್ಕೆಯಲ್ಲಿ ತೆಗೆದುಕೊಂಡು ಪ್ರೀತಿ ವಿಶ್ವಾಸ ಬಾಂಧವ್ಯ ವೃದ್ಧಿಸಿ ಮನುಷ್ಯನನ್ನು ವಿಚಾರವಂತರನ್ನಾಗಿ ಮಾಡಲು ಶಿವಶರಣರು ಶ್ರಮಿಸಿದರು. ಅವರದು ಶ್ರಮಸಂಸ್ಕೃತಿ. ಶಿವಶರಣರದು ಮೃದು ಸಂಸ್ಕೃತಿ. ಸಿದ್ಧಾಂತ ಪ್ರಯೋಗಕ್ಕೆ, ಸದಾಚಾರಕ್ಕೆ ಆದ್ಯತೆ ನೀಡಿದರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ಶರಣರು ಕೂಡಿದುಡಿದು ಹಂಚಿ ತಿನ್ನುವ ಕಾರ್ಯ-ದಾಸೋಹ ಸಂಸ್ಕೃತಿಯನ್ನು ಆಚರಣೆಗೆ ತಂದು ಕೊಟ್ಟರು ಎಂದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕರಾದ ಡಾ. ಲೀಲಾ, ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಎಚ್.ಬಿ.ಎಲ್. ರಾವ್, ದಾಕ್ಷಾಯಿಣಿ ಯಡಹಳ್ಳಿ, ಶಿವರಾಮು ಕೋಟ್ಯಾನ್, ಅನಸೂಯ ಗಲಗಲಿ, ಡಾ. ಜ್ಯೋತಿ ಸತೀಶ್, ಡಾ. ಉಮಾರಾವ್, ಸುಶೀಲಾ ದೇವಾಡಿಗ, ದುರ್ಗಪ್ಪ ಕೋಟಿಯವರ, ಶಿವಾರಜ್, ಎಂ.ಜೆ. ಶ್ಯಾಮಲಾ ಪ್ರಕಾಶ್, ರಮಾ ಉಡುಪ, ಸುಗಂಧಾ ಸತ್ಯಮೂರ್ತಿ, ಉಮಾಶೆಟ್ಟಿ, ಮಧುಸೂಧನರಾವ್ ಇದ್ದರು. ಪೂರ್ಣಿಮಾ ಶೆಟ್ಟಿ ನಿರೂಪಿಸಿ ವಂದಿಸಿದರು.