ಯಕ್ಷಗಾನಾಚಾರ್ಯನ ಕರ್ಮಭೂಮಿಯಲ್ಲಿ ಜಪಾನ್ ಪ್ರಾಚಾರ್ಯ
ಕಾಸರಗೋಡು: ಜಗತ್ತಿನ ಜಾನಪದ ಕಲೆಗಳ ಬಗ್ಗೆ ವಿಶೇಷ ಅಧ್ಯಯನ ಮತ್ತು ಸಂಶೋಧನೆ ನಡೆಸುತ್ತಿರುವ ಜಪಾನ್ ದೇಶದ ಪ್ರಾಚಾರ್ಯರೊಬ್ಬರು ಯಕ್ಷಗಾನ ಪಾರ್ತಿಸುಬ್ಬನ ಕರ್ಮಭೂಮಿಗೆ ಆಗಮಿಸಿ ಯಕ್ಷಗಾನ ಬೊಂಬೆಗಳ ಬಗ್ಗೆ ಮತ್ತು ಬೊಂಬೆಯಾಟದ ಬಗ್ಗೆ ತಿಳಿದುಕೊಂಡಿದ್ದಾರೆ.
ಅವರೇ ಮಂಗಳೂರು ವಿವಿ ಸಂದರ್ಶಕ ಪ್ರಾಧ್ಯಾಪಕ ಸುಮಿಯೊ ಮೊರಿಜಿರಿ. ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರ ಕೆ.ವಿ. ರಮೇಶ್ ನಿರ್ಮಿಸಿದ ಅತ್ಯಾಕರ್ಷಕ ಯಕ್ಷಗಾನ ಬೊಂಬೆಗಳನ್ನು ಸುಮಿಯೊ ಮೊರೆಜಿರಿ ವೀಕ್ಷಿಸಿದರು. ಇಷ್ಟು ಆಕರ್ಷಕ ರೂಪವಿನ್ಯಾಸದ, ವರ್ಣವೈವಿಧ್ಯತೆಯ ಬೊಂಬೆಗಳು ಪ್ರಪಂಚದ ಎಲ್ಲೂ ಇಲ್ಲವೆಂದು ಅವರು ಅಭಿಪ್ರಾಯಪಟ್ಟರು.
ಕೆ.ವಿ. ರಮೇಶ್ ಅವರು ಪ್ರಾತ್ಯಕ್ಷಿಕೆ ಮತ್ತು ಬೊಂಬೆಯಾಟ ಪ್ರದರ್ಶನ ನೀಡಿದರು. ನಿರ್ಜಿವ ಬೊಂಬೆಗಳಿಗೆ ಜೀವಚೈತನ್ಯ ನೀಡಿ ಮನುಷ್ಯರ ಹಾಗೇ ಅವುಗಳು ಮಾತನಾಡುವ, ಕುಣಿಯುವ ರೀತಿ ಸುಮಿಯೊ ಮೊಜಿರಿ ಅವರಲ್ಲಿ ಬೆರಗು ಮೂಡಿಸಿತು. ಇದೊಂದು ಪವಾಡವೆಂದು ಅವರು ಬಣ್ಣಿಸಿದರು.
ಮೂಲತಃ ಜಪಾನಿನ ಟೋಕಿಯೊದವರಾದ ಈ ಕಲಾಪ್ರೇಮಿ ಜಗತ್ತಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ಜಾನಪದ ಕಲೆಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಕೈಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಕಳೆದ 20 ವರ್ಷಗಳಿಂದ ಕರಾವಳಿಯ ಕಲೆಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಜಪಾನಿನಲ್ಲಿ ಬೊಂಬೆಯಾಟದ ಬಗ್ಗೆ ಅಧ್ಯಯನ ಮಾಡಿದ ಅವರು ಪಾಚೀನವಾದ ಆ ಮಹಾನ್ಕಲೆಯ ಪುನರುಜ್ಜೀವಕ್ಕಾಗಿ ಶ್ರಮಿಸುತ್ತಿದ್ದಾರೆ.
ಸುಮಿಯೊ ಮೊರಿಜಿರಿ ಅವರು ಕೆ.ವಿ. ರಮೇಶ್ ಜೊತೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಬಾರಿಕ್ಕಾಡು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸಂದರ್ಶಿಸಿದರು. ಅಲ್ಲಿ ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘದ ಬೊಂಬೆಯಾಟವನ್ನು ವೀಕ್ಷಿಸಿದರು. ಸೂತ್ರಧಾರರ ಕೈಚಳಕದಿಂದ ಕುಣಿಯುವ ಯಕ್ಷಗಾನ ಬೊಂಬೆಗಳನ್ನು ನೋಡಿ ವಿಸ್ಮಯಗೊಂಡರು.
ಜಪಾನಿನಲ್ಲೂ ಬೊಂಬೆಯಾಟಕ್ಕೆ ಅವಕಾಶ ನೀಡುವುದಾಗಿ ಹೇಳಿದ ಅವರು ಬೊಂಬೆಮನೆಯಲ್ಲಿ ಆಯೋಜಿಸಲಾಗುವ ಮ್ಯೂಸಿಯಂಗೆ ಪೂರ್ಣ ಸಹಕಾರವನ್ನು ಪ್ರಕಟಿಸಿದರು. ಪರಂಪರಾಗತ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಕೆ.ವಿ ರಮೇಶ್ರ ಎಲ್ಲಾ ಯೋಜನೆಗಳನ್ನು ಪ್ರೋತ್ಸಾಹಿ ಅದಕ್ಕೆ ವ್ಯಾಪಕ ಪ್ರಚಾರ ನೀಡುವುದಾಗಿ ಸುಮಿಯೊ ಮೊರಿಜಿರಿ ಭರವಸೆ ನೀಡಿದರು.
ಸೂತ್ರಧಾರರಾದ ತಿರುಮಲೇಶ, ಕೆ.ವಿ. ಸುದರ್ಶನ, ಕೆ.ವಿ. ಕುಮಾರಸ್ವಾಮಿ, ಚಂದ್ರಶೇಖರ ವಿ. ಮೊದಲಾದವರ ಅದ್ಭುತ ಕೈ ಚಳಕ ಮತ್ತು ಬೊಂಬೆಯಾಟದ ಕಲೆಯ ಮೇಲಿನ ಪ್ರೀತಿ, ಶ್ರದ್ಧೆಯನ್ನು ಅವರು ಶ್ಲಾಘಿಸಿದರು.