ಸಹೃದಯರಿಗೆ ಆನಂದ ನೀಡುವವನೇ ಕವಿ: ಹೆಗಡೆ
ಪುಣೆ: ಶಬ್ದಗಳು ಅಥವಾ ಪದಗಳಿಲ್ಲದೆ ಪದ್ಯವಿಲ್ಲ. ಅದೇ ಕಾವ್ಯದ ಮೂಲಭೂತ ಸರಕು. ಸಾಮಗ್ರಿ, ಸಂಪತ್ತು-ಅಷ್ಟೇ ಅಲ್ಲ ಕಾವ್ಯದ ಉಸಿರು. ಕವಿ ಶಬ್ದಬ್ರಹ್ಮ, ಶಬ್ದ ಗಾರುಡಿಗ. ಶಬ್ದಗಳಲ್ಲಿ ಅರ್ಥ ಹುದುಗಿಸಿ, ರಸಮಯವಾಗಿಸಿ-ಓದುಗರಿಗೆ, ಸಹೃದಯರಿಗೆ ಆನಂದ ನೀಡುವಂತೆ ಕವನ ರಚಿಸಿದವನೇ ಕವಿಯೆನ್ನಿಸಿಕೊಳ್ಳುತ್ತಾನೆ ಎಂದು ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರದ ಗೌ. ಪ್ರಧಾನ ಕಾರ್ಯದರ್ಶಿ ಕೃ.ಶಿ. ಹೆಗಡೆ ನುಡಿದರು. ಅವರು ಪುಣೆಯ ಕನ್ನಡಸಂಘವು ಅದರ ಸಭಾಗೃಹದಲ್ಲಿ ಸಂಸ್ಥೆಯ ಶಿಕ್ಷಣ ಸಮೂಹಗಳ ಚಿನ್ನದ ಹಬ್ಬದ ನಿಮಿತ್ತ ಆಯೋಜಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಮನ್ನರು ಕವಿಗೆ 'ಪ್ರವಾದಿ' ಎಂದರೆ ಗ್ರೀಕರು ಪೊಯರ್ ಅಂದರೆ ಮಾಡುವವ ಪೊಯಟ್ ಅಂದರೆ ಕರ್ತೃ ಎಂದಿದ್ದಾರೆ. ಈ ಶಬ್ದ ತುಳು-ಕನ್ನಡ ಮೂಲದಂತೆಯೂ ಧ್ವನಿಸುತ್ತದೆ. ಈ ಎರಡೂ ಭಾಷೆಗಳ ಶಬ್ದಗಳು ಪ್ರಾಚೀನ ಗ್ರೀಕ್ ಭಾಷೆಯಲ್ಲಿ ಕಂಡು ಬರುವುದರಿಂದ - ಈ ಕುರಿತು ಮೂಲಭೂತ ಸಂಶೋಧನೆ ಆಗಬೇಕು ಎಂದು ಹೇಳಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳೆಲ್ಲರೂ ಪುಣೆಯವರಾಗಿದ್ದು ಈ ಗೋಷ್ಠಿಯ ವೈಶಿಷ್ಟ್ಯವಾದರೆ, ಈ ದಿಶೆಯಲ್ಲಿ ಕವಿಗಳನ್ನೆಲ್ಲ ಒಂದೆಡೆ ಸೇರಿಸಿ ಕೆಲವು ಕವನಗಳಿಗೆ ಸ್ವರ ಸಂಯೋಜನೆ ಮಾಡಿ ರಾಗಬದ್ಧವಾಗಿ ಹಾಡುವಂತೆ ಸತತ ಪ್ರಯತ್ನ ನಡೆಸಿದ ಕವಿಗೋಷ್ಠಿಯ ರೂವಾರಿ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾಸಾಲಿಯಾನರ ಪ್ರಯತ್ನ ಶ್ಲಾಘನೀಯ. ತಮ್ಮ ಸ್ವರಚಿತ ಎರಡು ಕವನಗಳನ್ನು (ಶತಮಾನದ ಚಮತ್ಕಾರ-ಶ್ರೀಸಾಮಾನ್ಯ -ಆಮ್ ಆದ್ಮಿ!) ವಾಚನ ಮಾಡಿದರು. ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾಸಾಲಿಯಾನರು ಮಾತನಾಡಿದರು. ಕವಿಗೋಷ್ಠಿಯಲ್ಲಿ ವಿಶ್ವನಾಥ ಶೆಟ್ಟಿ ಪಾಂಗಾಳ, ಪೊಳಲಿ ಮಹೇಶ ಪ್ರಸಾದ ಹೆಗಡೆ, ಸುಧಾಕರಶೆಟ್ಟಿ ಕೆಮ್ತೂರ್, ಡಾ. ಲಲಿತಾರಾವ್, ಸುಭಾಷ್‌ಚಂದ್ರ ಸಕ್ರೋಜಿ, ಅನ್ನಪೂರ್ಣ ಸಕ್ರೋಜಿ, ಕೃಷ್ಣ ಇತ್ನಾಳ, ಚಂದ್ರಶೇಖರ ಶೆಟ್ಟಿ ನಿಟ್ಟೆ ಮತ್ತು ಆರ್.ಎಂ. ಗಣಾಚಾರಿ ಹೀಗೆ ಹನ್ನೊಂದು ಪುಣೆಯ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ಸ್ವರಸಂಯೋಜನೆಯೊಂದಿಗೆ ವಾಚನ ಮಾಡಿದರು. ಕನ್ನಡ ಮಾಧ್ಯಮದ ವಿದ್ಯಾರ್ಥಿ ವೃಂದವು ಡಿ.ಎಸ್. ಕರ್ಕಿಯವರ 'ಹಚ್ಚೇವು ಕನ್ನಡ ದೀಪ' ಗಾಯನ ಮಾಡಿದರು. ಕನ್ನಡ ಸಂಘದ ವಿಶ್ವಸ್ತ ಬಾಲಜಿತ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಸದಸ್ಯೆ ಶ್ರೀಮತಿ ಯಶೋದಾಮೋರೆ, ಸುನೀತಾ ಶಿರಗುಪ್ಪಿ ಇತರ ಕವಿಗಳನನ್ನು ಸತ್ಕರಿಸಿದರು.