'ತೌಳವ ನಿತ್ಯಾನುಷ್ಠಾನಂ' ಸಾಕ್ಷ್ಯಚಿತ್ರ ಡಿವಿಡಿ ಬಿಡುಗಡೆ
ಮುಂಬೈ: ಇಲ್ಲಿನ ಅಂಧೇರಿ ಪೂರ್ವದ ಸಂಜೀವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸ್ಲ್ಟೆಂಟ್ ಮುಂಬೈ ಪ್ರಾಂತ್ಯದ ಕಾರ್ಯಾಧ್ಯಕ್ಷ ಕನ್ನಡಿಗ ಡಾ.ಸುರೇಶ್ ಎಸ್. ರಾವ್ ಕಟೀಲು ಅವರ ಷಷ್ಠ್ಯಬ್ಧಿಯ ಸಂದರ್ಭದಲ್ಲಿ ಹೊರತರಲಾದ 'ತೌಳವ ನಿತ್ಯಾನುಷ್ಠಾನಂ' ಸಾಕ್ಷ್ಯಚಿತ್ರದ ವೀಡಿಯೋ ಡಿವಿಡಿಯನ್ನು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.
ಈ ಸಮಾರಂಭದಲ್ಲಿ ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಆಶೀವರ್ಚನ ನೀಡಿದರು. ಅತಿಥಿಗಳಾಗಿ ಕಟೀಲು ಶ್ರೀ ಕ್ಷೇತ್ರದ ಅರ್ಚಕ ವೇದಮೂರ್ತಿ ಹರಿನಾರಾಯಣ ಅಸ್ರಣ್ಣ, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಡಾ.ಎಚ್.ಸತ್ಯನಾರಾಯಣ ಆಚಾರ್ಯ ಇದ್ದರು.
ಅತಿಥಿ ಡಾ.ಸುರೇಶ್ ಎಸ್. ರಾವ್ ಕಟೀಲು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ ಮತ್ತು ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ನಿರೂಪಿಸಿ, ವಂದಿಸಿದರು.
ಅಂತಾರಾಷ್ಟ್ರೀಯ ಖ್ಯಾತಿಯ ಪದ್ಮಭೂಷಣ ವಿದ್ವಾನ್ ಶ್ರೀನಿವಾಸ ಅವರ ಮ್ಯಾಂಡೋಲಿನ್ ಕಛೇರಿ ನಡೆಯಿತು.