ಬಹ್ರೈನ್‌ನಲ್ಲಿ ಸಂಗೀತ ಸ್ಪರ್ಧೆ
ಬಹ್ರೈನ್: ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಬಹ್ರೈನ್ ಇತ್ತೀಚೆಗೆ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿತ್ತು. ನಾಲ್ಕು ವರ್ಷದ ಮೇಲ್ಪಟ್ಟ ಸುಮಾರು ಮೂವತ್ತಕ್ಕೂ ಹೆಚ್ಚು ಸದಸ್ಯರು ಮತ್ತು ಚಿಣ್ಣರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಭಾವ ಪೂರ್ಣವಾಗಿ ಹಾಡಿ ನೆರೆದವರ ಮನ ಗೆದ್ದರಲ್ಲದೆ, ನಿರ್ಣಾಯಕರಿಗೆ ಸವಾಲಾದರು. ನಂತರ ವಿಜೇತರಿಗೆ ನಿರ್ಣಾಯಕರು ಹಾಗೂ ನಿರ್ಣಾಯಕರಿಗೆ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿಯವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ನಿರ್ಣಾಯಕರುಗಳಾಗಿ ಶ್ರೀಮತಿಯರಾದ ರುಮಾನಾ ಸಯೀದ್, ಸುಷ್ಮಾ ವೇಣುಗೋಪಾಲ್ ಮತ್ತು ಚಾರುಲತಾ ಜೋಶಿಯವರು ಕಾರ್ಯನಿರ್ವಹಿಸಿದರು.
ನಂತರ ರುಮಾನಾ ಸಯೀದ್ ಅವರು ತಮ್ಮ ಕಂಠ ಸಿರಿಯಿಂದ ನೆರೆದವರನ್ನು ರೋಮಾಂಚನಗೊಳಿಸಿದರೆ ಸುಶ್ಮಾ ವೇಣುಗೋಪಾಲ್ ತಮ್ಮ ಹಾಡಿನಿಂದ ಪ್ರೇಕ್ಷಕರ ಮನ ತಣಿಸಿದರು. ಆರಂಭದಲ್ಲಿ ಮನರಂಜನೆ ಕಾರ್ಯದರ್ಶಿ ಮೋಹನ್ ಎಡನೀರ್ ಸ್ವಾಗತಿಸಿದರೆ ಪ್ರಧಾನ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ವಂದಿಸಿದರು. ಚೇತನಾ ಹೆಗಡೆಯವರ ನೇತೃತ್ವದ ನೇತ್ರಾವತಿ ತಂಡದವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾದರು.
ಸ್ಪರ್ಧೆಯಲ್ಲಿ ವಿಜೇತರಾದವರು: ವಯೋವುತಿ 4ರಿಂದ 8 ವರ್ಷ- ಹರಪ್ರಿಯಾ ಪಾಟೀಲ್ ಪ್ರಥಮ, ದೀಪಿಕಾ ಕಾಮತ್ ದ್ವಿತೀಯ. 8 ರಿಂದ 13 ವರ್ಷ- ಮಹಾಲಸಾ ಪಾಟೀಲ್ ಪ್ರಥಮ, ಸಮೀಕ್ಷಾ ಚಕ್ಕೆ ದ್ವಿತೀಯ. 13ರಿಂದ 18 ವರ್ಷ- ದಿವ್ಯಾ ದಾಮೋದರ್ ಪ್ರಥಮ, ಸಮಿಕ್ಷಾ ಶೆಟ್ಟಿ ದ್ವಿತೀಯ. 18ಕ್ಕೆ ಮೇಲ್ಪಟ್ಟು- ಪತಿಮಾ ಶೆಟ್ಟಿ ಪ್ರಥಮ, ಬಿ. ಕೆ. ಶೆಟ್ಟಿ ದ್ವಿತೀಯ.