ಸುದ್ದಿಗಳು

105 ಮತಗಳಿಂದ ದಿನೇಶ್ ಗುಂಡೂರಾವ್, 160 ಮತಗಳಿಂದ ಸೌಮ್ಯ ರೆಡ್ಡಿ ಪ್ರಯಾಸದ ಗೆಲುವು

Lingaraj Badiger

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಸಭೆ ಚುನಾವಣೆಯ ಫಲಿತಾಂಶ ಶನಿವಾರ ಹೊರಬಿದ್ದಿದ್ದು, ರಾಜಧಾನಿ ಬೆಂಗಳೂರಿನ ಹೃದಯ ಭಾಗವಾದ ಗಾಂಧಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ದಿನೇಶ್ ಗುಂಡುರಾವ್ ಕೇವಲ 105 ಮತಗಳ ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಮತ್ತು ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ದಿನೇಶ್ ಗುಂಡುರಾವ್ ಅವರು 113 ಮತಗಳಿಂದ ಗೆಲುವು ಸಾಧಿಸಿದರು. ಆದರೆ, ಕಡಿಮೆ ಅಂತರದಲ್ಲಿ ಗೆದ್ದ ಹಿನ್ನಲೆ ಮರು ಎಣಿಕೆ ಮಾಡುವಂತೆ ಸಪ್ತಗಿರಿ ಗೌಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು. ಮರು ಎಣಿಕೆ ನಂತರ ದಿನೇಶ್ ಗುಂಡೂರಾವ್ ಅವರು ಕೇವಲ 105 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಜಿದ್ದಾಜಿದ್ದಿ ಇದ್ದ ಕ್ಷೇತ್ರ ಗಾಂಧಿನಗರ ಬಿಜೆಪಿಯ ಅಭ್ಯರ್ಥಿಯಾಗಿ ಮಾಜಿ ಸಚಿವ ರಾಮಚಂದ್ರ ಗೌಡ ಅವರ ಪುತ್ರ ಸಪ್ತಗಿರಿ ಗೌಡ ಸ್ಪರ್ಧಿಸಿದ್ರು. ಹಾಗೇ ಜೆಡಿಎಸ್‌ ಪಕ್ಷದಿಂದ ವಿ. ನಾರಾಯಣಸ್ವಾಮಿ, ಬಿಜೆಪಿ ಟಿಕೆಟ್ ವಂಚಿತ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದರು. 

ಇನ್ನು ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ ಕೇವಲ 160 ಮತಗಳ ಅಂತರದಲ್ಲಿ ಸೌಮ್ಯ ರೆಡ್ಡಿ ಅವರು ಸಹ ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಬಿಜೆಪಿ ಪಾಳಯ ರೀ ಕೌಂಟಿಂಗ್‌ ಆಗಬೇಕು ಎಂದು ಮನವಿ ಮಾಡಿದೆ.

SCROLL FOR NEXT