ಮೃತ ವಿನಾಯಕ್ ಪಾಂಡುರಂಗ್ ಬಾಳಿಗ
ಮಂಗಳೂರು: ಕಳೆದ ಮಾರ್ಚ್ 21ರಂದು ಮಂಗಳೂರಿನಲ್ಲಿ ನಡೆದ ಆರ್ ಟಿಐ ಕಾರ್ಯಕರ್ತನ ಬರ್ಬರ ಹತ್ಯೆಯಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡುವುದಕ್ಕಾಗಿ ಕರ್ನಾಟಕದಲ್ಲಿ ರಚನೆಯಾದ ನಮೋ ಬ್ರಿಗೇಡ್ ನ ಸಂಸ್ಥಾಪಕ ಹಾಗೂ ಮಾಜಿ ಸಂಚಾಲಕನ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
51 ವರ್ಷದ ಆರ್ ಟಿಐ ಕಾರ್ಯಕರ್ತ ವಿನಾಯಕ್ ಪಾಂಡುರಂಗ್ ಬಾಳಿಗ ಅವರ ಹತ್ಯೆ ಪ್ರಕರಣದಲ್ಲಿ ನಮೋ ಬ್ರಿಗೇಡ್ ಸಂಸ್ಥಾಪಕರಲ್ಲಿ ಒಬ್ಬರಾದ 39 ವರ್ಷದ ನರೇಶ್ ಶೆಣೈ ಹಾಗೂ ಅವರ ಮೂವರು ಆಪ್ತರ ಕೈವಾಡ ಇದೆ ಎನ್ನಲಾಗುತ್ತಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ನರೇಶ್ ಶೆಣೈ ರಾಜ್ಯದಲ್ಲಿ ಆರ್ಎಸ್ಎಸ್ ನೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ತನಿಖೆಯಿಂದ ತಿಳಿದು ಬಂದಿದೆ.
ಹತ್ಯೆ ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ನಿನ್ನೆ ಧನ್ವಂತರಿ ನಗರದ ಶೆಣೈ ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಶೆಣೈ ಕಳೆದ ಒಂದು ವಾರದಿಂದ ತಲೆ ಮರೆಸಿಕೊಂಡಿದ್ದು, ಅವರ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನರೇಶ್ ಶೆಣೈ ಹರಿದ್ವಾರಕ್ಕೆ ಹೋಗಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಶೆಣೈ ಹರಿದ್ವಾರದಿಂದ ಅಂಡೋಮಾನ್ ಗೆ ಹೋಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಳಿಗ ಅವರು ಸಹ ಬಿಜೆಪಿ ಕಾರ್ಯಕರ್ತರಾಗಿದ್ದು, ಸ್ಥಳೀಯ ವೆಂಕಟರಮಣ ದೇವಸ್ಥಾನದ 9 ಕೋಟಿ ರುಪಾಯಿ ನಿದಿ ದುರ್ಬಳಕೆಗೆ ಸಂಬಂಧಿಸಿದಂತೆ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಹೋರಾಟ ನಡೆಸಿದ್ದರು. ಅಲ್ಲದೆ ನಗರದಲ್ಲಿ ಸರ್ಕಾರದ ವಿದ್ಯುತ್ ಅವ್ಯವಹಾರ ಕುರಿತಂತೆ 90 ಕ್ಕೂ ಹೆಚ್ಚು ಅಕ್ರಮಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಹೊರಗೆಳೆದಿದ್ದರು. ಆದರೆ ದೇವಸ್ಥಾನದ ವಿವಾದದ ಹಿನ್ನೆಲೆಯಲ್ಲಿ ಬಾಳಿಗ ಅವರನ್ನು ಟಾರ್ಗೆಟ್ ಮಾಡಲಾಗಿತ್ತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿಶಿತ್ ದೇವಾಡಿಗ ಹಾಗೂ ವಿನಿತ್ ಪೂಜಾರಿ ಎಂಬ ಆರೋಪಿಗಳನ್ನು ಪೊಲೀಸರು ಬಂದಿಸಿದ್ದು, ಪ್ರಮುಖ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics