ಬೆಂಗಳೂರು: ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಕಡಿಮೆಯಾಗಿದ್ದರೆ, ಮತ್ತೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಕಣ್ಣಾಮುಚ್ಚಾಲೆ ಮುಂದುವರೆದಿದೆ.
ಉಪಕೇಂದ್ರಗಳು ಮತ್ತು ಟ್ರಾನ್ಸ್ ಫಾರ್ಮರ್ ಗಳಲ್ಲಿನ ಓವರ್ ಲೋಡ್ ಕೆಲವು ಪ್ರದೇಶಗಳಲ್ಲಿ ಅಸ್ಥಿರ ವಿದ್ಯುತ್ ಪೂರೈಕೆಗೆ ಕಾರಣ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ತಾಂತ್ರಿಕ ದೋಷಗಳನ್ನು ಎದುರಿಸುತ್ತಿದ್ದೇವೆ ಎಂದಿರುವ ಬೆಸ್ಕಾಂ ಎಂಡಿ ಪಂಕಜ್ ಕುಮಾರ್ ಪಾಂಡೆ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಉಪಕೇಂದ್ರಗಳು ಮತ್ತು ಟ್ರಾನ್ಸ್ ಫಾರ್ಮರ್ ಗಳಲ್ಲಿ ಓವರ್ ಲೋಡ್ ಉಂಟಾಗುತ್ತದೆ ಹಾಗಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಸ್ಕಾಂ ಪ್ರಸ್ತುತ 4,600 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಎದುರಿಸುತ್ತಿದ್ದು, ಪೂರೈಕೆಯಲ್ಲಿ 100 -200 ಮೆಗಾವ್ಯಾಟ್ ಕೊರತೆ ಎದುರಿಸುತ್ತಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿರುವುದರಿಂದ ಬೆಸ್ಕಾಂ ಸದ್ಯಕ್ಕೆ ದುರಸ್ತಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದೆ. ರಾಯಚೂರು ಥರ್ಮಲ್ ಪವರ್ ಸ್ಟೇಷನ್ ಮತ್ತು ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ ನಲ್ಲಿ ವಿದ್ಯುತ್ ಉತ್ಪಾದನೆ ಕುಂಟಿತವಾಗಿದ್ದ ಕಾರಣ ಕಳೆದ ವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೆ ಮಂಗಳವಾರದಿಂದ ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ಮರಳಿದೆ.