ಪೊಲೀಸ್ ಸಿಬ್ಬಂದಿ ಕೊರೆತ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್
ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಯಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಸರ್ಕಾರದ ಧೋರಣೆಗೆ ಹೈ ಕೋರ್ಟ್ ಶನಿವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ...
ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಯಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಸರ್ಕಾರದ ಧೋರಣೆಗೆ ಹೈ ಕೋರ್ಟ್ ಶನಿವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಲು ಸೂಕ್ತ ಕ್ರಮಗೊಳ್ಳುವುದಾಗಿ ನ್ಯಾಯಪೀಠಕ್ಕೆ ಈ ಹಿಂದೆ ಸರ್ಕಾರ ತಿಳಿಸಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ರೀತಿಯ ಬೆಳವಣಿಗೆ ಕಂಡುಬರದ ಹಿನ್ನೆಲೆಯಲ್ಲಿ ನಿನ್ನೆ ನಡೆದ ವಿಚಾರಣೆ ವೇಳೆ ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಪೊಲೀಸ್ ಸಿಬ್ಬಂದಿ ಕೊರೆ ಮತ್ತು ಠಾಣೆಗೆ ದಾಖಲಾಗಿರುವ ದೂರುಗಳ ವಿಚಾರಣೆ ವಿಳಂಬಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ವೇಣುಗೋಪಾಲ್ ಗೌಡ ಅವರಿದ್ದ ನ್ಯಾಯಪೀಠ, ವಿಚಾರಣೆ ವೇಳೆ ನೇಮಕ ಪ್ರಕ್ರಿಯೆಗೆ ಇರುವ ಸಮಸ್ಯೆ ಕುರಿತು ಸರ್ಕಾರ ನ್ಯಾಯಾಲಯಕ್ಕೆ ಸರಿಯಾದ ಹೇಳಿಕೆಯನ್ನು ನೀಡುತ್ತಿಲ್ಲ. ನೇಮಕಕ್ಕಿರುವ ತೊಡಕುಗಳೇನು ಎಂಬ ಬಗ್ಗೆ ಚರ್ಚಿಸಿ ಶೀಘ್ರಗತಿಯಲ್ಲಿ ವಿವರಣೆ ನೀಡಬೇಕೆಂದು ಹೇಳಿದೆ. ಅಲ್ಲದೆ, ನೇಮಕ ವಿಳಂಬಕ್ಕೆ ಸಂಬಂಧಿಸಿ ಮುಂದಿನ ವಿಚಾರಣೆ ವೇಳೆ ರಾಜ್ಯ ಅಡ್ವೋಕೇಟ್ ಜನರಲ್ ಖುದ್ದು ಹಾಜರಾಗಿ ವಿವರಣೆ ನೀಡಬೇಕೆಂದು ಸೂಚನೆ ನೀಡಿದೆ.
ಇದೇ ವೇಳೆ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ ಕುರಿತಂತೆ ಸರ್ಕಾರವನ್ನು ಪ್ರಶ್ನೆ ಮಾಡಿರುವ ನ್ಯಾಯಾಲಯವು, ನಗರದಲ್ಲಿ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಗೆ ಮೂಲ ಕಾರಣ ತಿಳಿಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಘಟನೆ ವೇಳೆ 1.25 ಲಕ್ಷ ಜನ ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಪ್ರತಿಭಟನೆ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ಇರಲಿಲ್ಲವೇ? ಘಟನೆ ಹಿಂದೆ ಬೇರೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದ್ದು ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದೆ.
ಪೊಲೀಸ್ ಇಲಾಖೆಯ ಶಕ್ತಿಯ ಹೆಚ್ಚಿಸಬೇಕಿದ್ದು, ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಹಲವಾರು ಪ್ರಕರಣಗಳು ವಿಳಂಬವಾಗುತ್ತಿದೆ. ಅಲ್ಲದೆ ವಿಧಿವಿಜ್ಞಾನ ಪ್ರಯೋಗಾಲಯ ಇಲಾಖೆಯಲ್ಲೂ ಸಿಬ್ಬಂದಿಗಳ ಕೊರತೆಯಿದ್ದು, ಹಲವಾರು ಪ್ರಕರಣಘಲು 6 ತಿಂಗಳಿಗೂ ಹೆಚ್ಚು ಕಾಲ ವಿಚಾರಣಾ ಹಂತದಲ್ಲಿ ಇರುವಂತಾಗಿದೆ. ಇದಕ್ಕೆಲ್ಲ ಪೊಲೀಸ್ ಇಲಾಖೆಯಲ್ಲಿರುವ ಸಿಬ್ಬಂದಿಗಳ ಕೊರತೆಯೇ ಮೂಲಕ ಕಾರಣವಾಗಿದೆ. ಸಿಬ್ಬಂದಿಗಳ ನೇಮಕ ಸಂಬಂಧಿಸಿ ಸರ್ಕಾರ ಶೀಘ್ರಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.