ಮೈಸೂರು: ಮನುಷ್ಯನ ಆರೋಗ್ಯದ ವಿಚಾರ ಬಂದಾಗ ಸೇವಿಸುವ ಆಹಾರ ಬಹಳ ಮುಖ್ಯವಾಗಿರುತ್ತದೆ. ಜಂಕ್ ಫುಡ್, ಎಣ್ಣೆ ಪದಾರ್ಥ, ಮಸಾಲೆ ತಿನಿಸುಗಳಿಂದ ಆದಷ್ಟು ದೂರವಿದ್ದು ನಮ್ಮ ಸಂಪ್ರದಾಯದ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯರು ಹಾಗೂ ಮನೆಯಲ್ಲಿ ಹಿರಿಯರು ಹೇಳುತ್ತಿರುತ್ತಾರೆ.
ಅಧಿಕ ಪೋಷಕಾಂಶವನ್ನು ಹೊಂದಿರುವ ಸಂಪ್ರದಾಯಬದ್ಧ ಆಹಾರಗಳ ಪ್ರಾಮುಖ್ಯತೆಯನ್ನು ಜನರಿಗೆ ಪ್ರಚಾರ ಮಾಡಲು ಮೈಸೂರಿನ ಸಹಜ ಸಮೃದ್ಧ ಎಂಬ ಸರ್ಕಾರೇತರ ಸಂಘಟನೆ ಅನ್ನ ಆರೋಗ್ಯ ಎಂಬ ವಾಟ್ಸಾಪ್ ಗುಂಪನ್ನು ರಚಿಸಿದೆ.
ಪ್ರತಿದಿನ ಸಹಜ ಸಮೃದ್ಧ ಗುಂಪಿನ ಸದಸ್ಯರು ಹೊಸ ಹೊಸ ಸಂಪ್ರದಾಯಿಕ ರುಚಿಗಳನ್ನು ಮತ್ತು ಅವಗಳ ಬಗ್ಗೆ ವಿಸ್ತೃತ ವಿವರಣೆ ನೀಡಿ ಅದರ ಆರೋಗ್ಯ ಪ್ರಯೋಜನಗಳನ್ನು ವಿವರಿಸಿ ಪೋಸ್ಟ್ ಮಾಡುತ್ತಾರೆ.
ನಗರವಾಸಿಗಳಲ್ಲಿ ಬಹುಪಾಲು ಜನರಿಗೆ ಧಾನ್ಯಗಳಿಂದ ತಯಾರಿಸುವ ಅನೇಕ ತಿಂಡಿ-ತಿನಿಸುಗಳ ಬಗ್ಗೆ ಅರಿವಿರುವುದಿಲ್ಲ. ವಾಟ್ಸಾಪ್ ನಲ್ಲಿ ಆ ಬಗ್ಗೆ ಜನರಿಗೆ ತಿಳಿಸಿದರೆ ಅವರಿಗೆ ಅದನ್ನು ಮಾಡಿ ತಿನ್ನೋಣ ಅನಿಸುತ್ತದೆ. ಆ ಮೂಲಕ ಆರೋಗ್ಯಯುತವಾದ ಸಂಪ್ರದಾಯಿಕ ಆಹಾರಗಳ ಬಗ್ಗೆ ಜನರಿಗೆ ಮಾಹಿತಿ ಹಂಚಲಾಗುತ್ತಿದೆ.
ಸಹಜ ಸಮೃದ್ಧಿ ಸದಸ್ಯರು ರುಚಿಕರವಾದ, ಪೌಷ್ಟಿಕಾಂಶಭರಿತ ತಿನಿಸುಗಳಾದ ಪುಲಾವ್, ತರಕಾರಿ ಬಾತ್, ಚಿತ್ರಾನ್ನ, ಧಾನ್ಯಗಳಿಂದ ಮಾಡಿದ ಪೌಷ್ಟಿಕಯುಕ್ತ ದೋಸೆ, ಪಡ್ಡು, ನವಣೆ ಇಡ್ಲಿ, ಚಿಗಲಿ, ಸಜ್ಜೆ ರೋಟಿ ಮತ್ತು ರಾಗಿ ಮೇಥಿ ರೋಟಿಯನ್ನು ಮಾಡುವ ವಿಧಾನವನ್ನು ವಾಟ್ಸಾಪ್ ನಲ್ಲಿ ಹಾಕುತ್ತಾರೆ. ಇವುಗಳಲ್ಲಿ ಹೆಚ್ಚಿನ ತಿನಿಸುಗಳು ಸಕ್ಕರೆ ಕಾಯಿಲೆ, ಹೃದಯ ಕಾಯಿಲೆಯಿರುವವರಿಗೆ ಹಾಗೂ ಇತರ ಅನೇಕ ಸಮಸ್ಯೆಗಳಿಗೆ ಉಪಕಾರವಾಗುತ್ತದೆ.
ಆಹಾರತಜ್ಞರು, ಆಹಾರ ವಿಜ್ಞಾನದಲ್ಲಿ ಪಿಎಚ್ಡಿ ಹೊಂದಿರುವವರು, ಕೃಷಿ ವಿಶ್ವವಿದ್ಯಾಲಯ ನೌಕರರು ಮತ್ತು ತಜ್ಞರು ತಮ್ಮ ಸಲಹೆಗಳನ್ನು ಗುಂಪಿನ ಸದಸ್ಯರಿಗೆ ನೀಡುತ್ತಾರೆ. ನಿಗದಿತ ಆಹಾರ ಪದಾರ್ಥದ ಪ್ರಯೋಜನಗಳ ಬಗ್ಗೆ ತಿಳಿಸುತ್ತಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಸಹಜ ಸಮೃದ್ಧ ಸ್ಥಾಪಕ ಕೃಷ್ಣ ಪ್ರಸಾದ್, ನಮ್ಮ ಹಿರಿಯರು ಮಾಡುತ್ತಿದ್ದ ಸಾಂಪ್ರದಾಯಿಕ ಆಹಾರಗಳು ನಗರಗಳಲ್ಲಿ ಇಂದು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಜನರು ಬೇಗನೆ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರು ತಿನ್ನುವ ಆಹಾರ ತಟ್ಟೆಗೆ ಮತ್ತೆ ಸಾಂಪ್ರದಾಯಿಕ ತಿನಿಸುಗಳನ್ನು ತರುವುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ.
ವಿಟಮಿನ್, ಕಬ್ಬಿಣ ಮತ್ತು ಕ್ಯಾಲ್ಸಿಯಮ್ ಮಾತ್ರೆಗಳನ್ನು ತಿನ್ನುವ ಬದಲು ನಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ, ಹೆಚ್ಚೆಚ್ಚು ಧಾನ್ಯಗಳನ್ನು ಸೇವಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿ ದೇಹದ ಶಕ್ತಿಯ ಮಟ್ಟ ವೃದ್ಧಿಯಾಗುತ್ತದೆ ಎನ್ನುತ್ತಾರೆ ಸಹಜ ಸಮೃದ್ಧ ಗುಂಪಿನ ಸದಸ್ಯೆ ಸೀಮಾ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos