ಹೆತ್ತವರ ಹೆಣದ ಮುಂದೆ ಕುಳಿತ ಮುಗ್ದ ಕಂದ
ಕೊಪ್ಪಳ: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ದಂಪತಿಗಳಿಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಪಕ್ಕದಲ್ಲೇ ಏನೂ ಅರಿಯದ ಎರಡು ವರ್ಷದ ಪುಟ್ಟ ಕಂದಮ್ಮ ಕುಳಿತು ತಿಂಡಿ ತಿನ್ನುತ್ತಿರುವ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ.
ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಗದಗ ಜಿಲ್ಲೆಯ ಅಣ್ಣಿಗೇರಿ ಮೂಲದ ವೀರಣ್ಣ (55) ಮತ್ತು 45ರ ಹರೆಯದ ಪತ್ನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ದಂಪತಿಗಳು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಎರಡು ವರ್ಷದ(ದೇವರಾಜು) ಪುಟ್ಟ ಕಂದನಿಗೆ ತನ್ನ ಅಪ್ಪ, ಅವ್ವ ಸಾವನ್ನಪ್ಪಿದ್ದಾರೆ ಅನ್ನೋದೇ ತಿಳಿದಿಲ್ಲವಾಗಿತ್ತು. ತಂದೆ, ತಾಯಿ ಹೆಣದ ಸಮೀಪವೇ ಕುಳಿತ ಮುಗ್ಧ ಕಂದಮ್ಮನ ದೃಶ್ಯ ಮನಕಲಕುವಂತಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪುಟ್ಟ ಕಂದಮ್ಮನನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದು, ಅಪ್ಪ, ಅಮ್ಮನನ್ನು ಕಳೆದುಕೊಂಡಿರುವ ಕಂದ ಅನಾಥವಾಗಿದೆ.
ಗದಗ ಜಿಲ್ಲಾಸ್ಪತ್ರೆಗೆ ದಂಪತಿ ಮೃತದೇಹವನ್ನು ರವಾನಿಸಲಾಗಿದೆ.