ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಅನಾಣ್ಯೀಕರಣ ಯೋಜನೆಗೆ ಜೆಡಿಯು ಮುಖಂಡ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಜೆಡಿಯು ಬೆಂಬಲಿಗರು ಕಳೆದ ಒಂದು ತಿಂಗಳಿಂದ ಕಾರ್ಯ ನಿರ್ವಹಿಸದ ಎಟಿಎಂಗೆ ಅಂತಿಮ ಸಂಸ್ಕಾರ ನಡೆಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇರುವ ಎಟಿಎಂನ ತಿಥಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹಳೆಯ 500, 1000 ರೂ. ಮುಖಬೆಲೆಯ ನೋಟುಗಳು ನಿಷೇಧಿಸಿ ಪ್ರಧಾನಿ ನರೇಂದ್ರ ಮೋದಿ ತೀರ್ಮಾನ ಕೈಗೊಂಡು ಒಂದು ತಿಂಗಳು ಆಗಿದೆ. ಕಳೆದೊಂದು ತಿಂಗಳಿಂದ ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ. ಜನಸಾಮಾನ್ಯರ ಕೈಗೆ ಹಣ ಸಿಗದೇ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬಂದ್ ಆಗಿರುವ ಎಟಿಎಂಗಳು ಜನರ ಪಾಲಿಗೆ ಸತ್ತು ಹೋದಂತೆ. ಆದ್ದರಿಂದ ತಿಥಿ ಮಾಡುವ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಸಂಘ-ಸಂಸ್ಥೆಗಳ ನೂರಕ್ಕೂ ಹೆಚ್ಚು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಪ್ರತಿಭಟನಾಕಾರರು ಕೊರಿಯರ್ ಮೂಲಕ ವಡೆ, ಲಾಡು ಅನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಕಳಿಸಿಕೊಟ್ಟರು.