ಬೆಂಗಳೂರು: ಆಪರೇಶನ್ ಎಲಿಫೆಂಟ್ ಕ್ಯಾಪ್ಚರ್ ನಿನ್ನೆ ಆರಂಭಗೊಂಡಿದ್ದು ನೆಲಮಂಗಲ ಮತ್ತು ಮಾಗಡಿ ಅರಣ್ಯ ಪ್ರದೇಶಗಳ ಸುತ್ತಮುತ್ತ 100 ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಮಾನವ, ಆನೆಗಳ ಮಧ್ಯೆ ಸಂಘರ್ಷ ಹೆಚ್ಚಾಗುತ್ತಿದ್ದಂತೆ ನಾಡಿಗೆ ಬರಲಾರಂಭಿಸಿರುವ ಆನೆಗಳನ್ನು ಹಿಡಿಯುವ ಕಾರ್ಯಾಚರಣೆಗೆ ಇಲಾಖೆ ಮುಂದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಅರಣ್ಯ ವಲಯಗಳಲ್ಲಿ ಮತ್ತು ಮಾಗಡಿ ಅರಣ್ಯದ ಸುತ್ತಮುತ್ತ ಆನೆಗಳು ತಿರುಗಾಡುತ್ತಿವೆ ಎನ್ನುತ್ತಾರೆ ಸಿಬ್ಬಂದಿ.
ಮೈಸೂರು ದಸರಾ ಆನೆಗಳನ್ನು ಪಳಗಿಸುವವರು ಇಲ್ಲಿನ ಆನೆಗಳನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ನೆರವಾಗುತ್ತಿದ್ದಾರೆ. ಇಬ್ಬರ ಸಾವಿಗೆ ಕಾರಣವಾದ ಬಲಿಷ್ಟ ದಂತಗಳನ್ನು ಹೊಂದಿರುವ ಆನೆಗಳನ್ನು ಹಿಡಿಯುವ ಕಾರ್ಯಾಚರಣೆ ಕೂಡ ನಡೆಯುತ್ತಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ರಾಮನಗರದ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಮಂಜುನಾಥ್, ಆನೆಗಳನ್ನು ಗುರುತು ಹಿಡಿಯಲಾಗಿದ್ದು ಕಾರ್ಯಾಚರಣೆ ನಿನ್ನೆ ಬೆಳಗ್ಗೆ 7 ಗಂಟೆಗೆ ನೆಲಮಂಗಲ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಆರಂಭವಾಗಿದೆ. ಯಾವಾಗ ಆನೆಗಳನ್ನು ಹಿಡಿಯುತ್ತಾರೆ ಎಂದು ಹೇಳುವುದು ಕಷ್ಟ ಎನ್ನುತ್ತಾರೆ.