ರಾಮನಗರ: ತಹಸೀಲ್ದಾರ್ ರಮೇಶ್ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವರ ತಾಯಿಯನ್ನು ಹತ್ಯೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ತಹಶೀಲ್ದಾರ್ ಗೃಹಕಚೇರಿಯಲ್ಲೇ ರಮೇಶ್ ಅವರ ತಾಯಿ ಪುಟ್ಟಲಿಂಗಮ್ಮ ಉರುಫ್ ತಾಯಕ್ಕ(65) ಕೊಲೆಯಾಗಿದೆ. ಸಂಜೆ ತಹಶೀಲ್ದಾರ್ ರಮೇಶ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಪುಟ್ಟಲಿಂಗಮ್ಮ ಅವರ ಮೈಮೇಲೆ ಗಾಯದ ಗುರುತುಗಳಿದ್ದು, ಅವರು ಅಡುಗೆ ಕೋಣೆಯಲ್ಲಿ ಶವವಾಗಿ ಬಿದ್ದಿದ್ದರು.
ಮೃತ ತಾಯಕ್ಕ ಕೈಯಲ್ಲಿ ಕೂದಲು ಸಿಕ್ಕಿದ್ದು, ಹೊರ ಹೋಗುವಾಗ ಗೋಡೆ ಮೇಲಾದ ರಕ್ತದ ಕಲೆಗಳು ಸಾಕ್ಷಿಯಾಗಿದೆ. ಜೊತೆಗೆ ಮನೆ ಎದುರಿಗಿರುವ ಮಣಪ್ಪುರಂ ಗೋಲ್ಡ್‌ಲೋನ್ ಕಂಪನಿಯ ಸಿಸಿ ಕ್ಯಾಮೆರಾದಲ್ಲಿ ಕೆಲವರ ಚಲನವಲನಗಳು ದಾಖಲಾಗಿದ್ದು, ಫೂಟೇಜ್ ಸಿಕ್ಕಿದೆ ಎನ್ನಲಾಗಿದೆ.
ಕೊಲೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ, ಹಣಕ್ಕಾಗಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಬೆನ್ನು ಹತ್ತಿರುವ ಪೋಲೀಸರು ಕೂಡಲೇ ಹಂತಕರನ್ನು ಪತ್ತೆಹಚ್ಚಲು ತಂಡ ರಚಿಸಿದ್ದಾರೆ. ತನಿಖೆ ನಂತರವಷ್ಟೇ ಎಲ್ಲದಕ್ಕೂ ಉತ್ತರ ದೊರೆಯಲಿದೆ ಎಂದು ಎಸ್ಪಿ ಡಾ. ಚಂದ್ರಗುಪ್ತ ಹೇಳಿದ್ದಾರೆ.