ರಾಜ್ಯ

ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ನಾಳೆ ಪ್ರಾಥಮಿಕ ವರದಿ ಸಲ್ಲಿಸಲಿರುವ ಸಿಐಡಿ?

Srinivas Rao BV

ಬೆಂಗಳೂರು: ಮಂಗಳೂರು ಡಿವೈಎಸ್ ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಜು.9 ರಂದು ಗಣಪತಿ ಅವರ ಪತ್ನಿ, ಸಹೋದರ, ತಂದೆ ಸೇರಿದಂತೆ ಕುಟುಂಬದ ಸದಸ್ಯರ ವಿಚಾರಣೆ ನಡೆಸಿದ್ದಾರೆ.

ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್ ನೇತೃತ್ವದ ಅಧಿಕಾರಿಗಳ ತಂಡ ಗಣಪತಿ ಅವರ ಹುಟ್ಟೂರಾದ ರಂಗಸಮುದ್ರದಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು, ಸಂಬಂಧಿಗಳಿಂದ ಗಣಪತಿ ಅವರ ಆತ್ಮಹತ್ಯೆಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಸಿಐಡಿ ಅಧಿಕಾರಿಗಳ ಮತ್ತೊಂದು ತಂಡ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಶೋಧಕಾರ್ಯ ನಡೆಸಿದ್ದು, ಅಲ್ಲಿನ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.

ಡಿವೈಎಸ್ ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡ ಕೊಠಡಿಯನ್ನು ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಘಟನಾವಳಿಗಳ ಬಗ್ಗೆ ಸಿಬ್ಬಂದಿಗಳಿಂದ ಮಾಹಿತಿ ಪಡೆದಿದ್ದು, ಆತ್ಮಹತ್ಯೆ ಪ್ರಕರಣದ ಮೊದಲ(ಪ್ರಾಥಮಿಕ) ವರದಿಯನ್ನು ತಯಾರಿಸಲಾಗಿದ್ದು ಜು.10 ರಂದು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಗಣಪತಿ ಆತ್ಮಹತ್ಯೆಗೆ ಕುಟುಂಬ ಹಾಗೂ ವೃತ್ತಿಯಲ್ಲಿ ಎದುರಿಸಿದ ಸಮಸ್ಯೆಯೇ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿರುವ ಬಗ್ಗೆ ಟಿವಿ ಮಾಧ್ಯಮಗಳ ವರದಿ ಮೂಲಕ ತಿಳಿದುಬಂದಿದೆ.

SCROLL FOR NEXT