ಬೆಂಗಳೂರು: ಸಚಿವ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ಆಗ್ರಹಿಸಿ ಎರಡು ದಿನಗಳಿಂದಲೂ ವಿಧಾನ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸಿದ್ದ ಬಿಜೆಪಿ ನಾಯಕರು, ಶುಕ್ರವಾರ ಅಧಿವೇಶನ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಗಣಪತಿಯವರ ಆತ್ಮಹತ್ಯೆ ಪ್ರಕರಣ ಹಿಡಿದು ಜಾರ್ಜ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳು ಬುಧವಾರದಿಂದಲೇ ಆಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಇದಲ್ಲದೆ, ಗುರುವಾರ ಕೂಡ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರು. ಈ ಹಿನ್ನೆಲೆಯಲ್ಲಿ ಮುಂಗಾರು ಅಧಿವೇಶನವನ್ನು ಇಂದಿಗೇ ಅಂತಿಮಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಹೀಗಾಗಿ ಬಿಜೆಪಿ ನಾಯಕರು ಜಾರ್ಜ್ ರಾಜೀನಾಮೆ ಆಗ್ರಹಿಸಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ.
ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರು ಅತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ಅಂತರದಲ್ಲಿ ಅಂದರೆ, ಜು.7 ರಂದು ಇದೇ ದರ್ಜೆಯ ಹುದ್ದೆಯಲ್ಲಿರುವ ಗಣಪತಿಯವರು ಆತ್ಮಹತ್ಯೆ ಮಾಡಿಕೊಂಡಿದ್ದರು. ನನಗೇನಾದರೂ ಆದರೆ ಜಾರ್ಜ್ ಸೇರಿ ಇಬ್ಬರು ಅಧಿಕಾರಿಗಳು ನೇರ ಹೊಣೆಯಾಗಿರುತ್ತಾರೆಂದು ಖಾಸಗಿ ಮಾಧ್ಯಮವೊಂದರ ಮುಂದೆ ಹೇಳಿಕೊಂಡಿದ್ದರು.
ಒಬ್ಬರ ಹಿಂದೆ ಒಬ್ಬರಂತೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಮುಂಗಾರು ಅಧಿವೇಶನವನ್ನು ಆರಂಭಿಸಿತ್ತು. ಇದರಂತೆ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣವನ್ನು ಪ್ರತಿಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡು ಸರ್ಕಾರದ ವಿರುದ್ಧ ಸಾಕಷ್ಟು ವಿರೋಧಗಳನ್ನು ವ್ಯಕ್ತಪಡಿಸಲು ಆರಂಭಿಸಿದವು. ಜುಲೈ.30 ರವರೆಗೂ ಅಧಿವೇಶನ ನಡೆಸಲು ಈ ಹಿಂದೆ ಸರ್ಕಾರ ತೀರ್ಮಾನಿಸಿತ್ತು. ಆದರೆ, ಪ್ರತಿಪಕ್ಷಗಳು ಪ್ರತಿಭಟನೆಯ ಹಾದಿ ಹಿಡಿದು ಅಧಿವೇಶನ ಸುಗಮವಾಗಿ ಸಾಗಲು ಬಿಡದ ಕಾರಣ ಇಂದಿಗೇ ಅಂತಿಮಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಇದರಂತೆ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಈ ಹಿಂದೆ ಮಡಿಕೇರಿಗೆ ನೀಡಿಲಾಗಿದ್ದ ಬಂದ್ ಕರೆ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಅಧಿವೇಶನ ಮುಗಿಯುತ್ತಿದ್ದಂತೆಯೇ ಕೊಡಗಿನವರೆಗೂ ಪಾತ್ರಯಾತ್ರೆ ನಡೆಸಲು ತೀರ್ಮಾನಿಸಿದೆ.
ಜನಾಭಿಪ್ರಾಯಗಳು ವ್ಯಕ್ತವಾಗುತ್ತಿದ್ದರೂ ಬಾಯಿಮುಚ್ಚಿಕೊಂಡಿರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಜೆ. ಜಾರ್ಜ್ ಅವರನ್ನು ರಕ್ಷಿಸುತ್ತಿದ್ದಾರೆ. ಪ್ರತಿಪಕ್ಷಗಳ ಪ್ರತಿಭಟನೆಯನ್ನೇ ಬಳಸಿಕೊಂಡು ಸರ್ಕಾರ ವಿತ್ತ ಮಸೂದೆಯನ್ನು ಮಂಡಿಸದೆ ಸುಮ್ಮನಿರಬಾರದು. ಶುಕ್ರವಾರ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರ ವಿತ್ತ ಮಸೂದೆಯನ್ನು ಮಂಡಿಸಬೇಕೆಂದು ವಿಧಾನಸಭಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.