ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರಕ್ಕೆ ಅಭಿಮಾನಿಗಳಿಂಗ ಅಭೂತಪೂರ್ವ ಸ್ವಾಗತದ ಬೆನ್ನಲ್ಲೇ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಬಿಸಿ ಕೂಡ ಶುರುವಾಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಏಕಕಾಲದಲ್ಲಿ ಕಬಾಲಿ ಚಿತ್ರ ತೆರೆಕಂಡಿರುವ ಹಿನ್ನಲೆಯಲ್ಲಿ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕನ್ನಡ ಚಳುವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಕಾವೇರಿ ವಿಚಾರದಲ್ಲಿ ಕರ್ನಾಟಕದ ಪರ ರಜನಿಕಾಂತ್ ನಿಲ್ಲಲ್ಲಿಲ್ಲ ಎಂದು ವಾಟಾಳ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ವಾಟಾಳ್ ನಾಗರಾಜ್ ಅವರ ಪ್ರತಿಭಟನೆಗೆ ರಜನಿಕಾಂತ್ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆಗೆ ರಜನಿ ಅಭಿಮಾನಿಗಳು ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕನ್ನಡ ಪರ ಹೋರಾಟಗಾರರು ಮತ್ತು ರಜನಿ ಅಭಿಮಾನಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚುದುರಿಸಿದ ಬಳಿಕ ಪರಿಸ್ಥಿತಿ ತಿಳಿಗೊಂಡಿದೆ.