ಕೋಲಾರ: ನಗರದಲ್ಲಿ ಮತ್ತೆ ನಾಯಿಗಳ ಹಾವಳಿ ಆರಂಭವಾಗಿದ್ದು, ಬೀದಿ ನಾಯಿಗಳ ದಾಳಿಗೆ 14 ಮಕ್ಕಳು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಶಹೆನ್ಶಾಹ್ ನಗರದಲ್ಲಿನ ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಂದಿರುವ ನಾಯಿಗಳ ಗುಂಪೊಂದು ಮಕ್ಕಳ ಮೇಲೆ ದಾಳಿ ಮಾಡಿದೆ. ನಾಯಿಗಳು ದಾಳಿ ಮಾಡುತ್ತಿರುವುದನ್ನು ನೋಡಿದ ಅಲ್ಲಿನ ಸ್ಥಳೀಯರು ಕಲ್ಲು ಹೊಡೆದು ನಾಯಿಗಳನ್ನು ಓಡಿಸುವ ಮೂಲಕ ಮಕ್ಕಳನ್ನು ರಕ್ಷಿಸಿದ್ದಾರೆ.
ದಾಳಿಯಲ್ಲಿ ಕುಲ್ಸುಮ್ (5), ತಸ್ಲೀಮ್ (5) ಮತ್ತು ಶಕೀನಾ (4) ಎಂಬ ಮೂರು ಮಕ್ಕಳು ಗಂಭೀರವಾಗಿ ಗೊಂಡಿದ್ದು, ಇನ್ನುಳಿದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಇನ್ನು ಗಾಯಗೊಂಡ ಮಕ್ಕಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಹೇಳಲಾಗುತ್ತಿದೆ.
ಘಟನೆ ಬುಧವಾರ ಬೆಳಿಗ್ಗೆ ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ನಡೆದಿದೆ. ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ನಾಯಿಗಳ ದಾಳಿ ತಪ್ಪಿಸಲು ಆಡಳಿತ ಮಂಡಳಿ ಕ್ರಮಕೈಗೊಳ್ಳಲಿದೆ ಎಂದು ಮುನ್ಸಿಪಲ್ ಕೌನ್ಸಿಲ್ ಆಯುಕ್ತ ಲಕ್ಷ್ಮಿನಾರಾಯಣ ಅವರು ಹೇಳಿದ್ದಾರೆ.
ಪ್ರಾಣಿ ಜನನ ನಿಯಂತ್ರಣ ಕುರಿತಂತೆ ಟೆಂಡರ್ ಕರೆಯುವಂತೆ ಎಲ್ಲಾ ಜಿಲ್ಲೆಯ ಪುರಸಭೆಗಳಿಗೂ ಕರೆ ನೀಡಲಾಗಿದೆ ಎಂದು ಕೋಲಾರ ಉಪ ಆಯುಕ್ತ ಕೆ.ವಿ. ತ್ರಿಲೋಕ್ ಚಂದ್ರ ಅವರು ಹೇಳಿದ್ದಾರೆ.
ಅನಧಿಕೃತ ಮಾಂಸ ಮಳಿಗೆಗಳು ಬೀದಿ ನಾಯಿಗಳನ್ನು ಆಕರ್ಷಿಸುತ್ತಿದ್ದು, ಘಟನೆಗೆ ಇದೇ ಕಾರಣ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.