ರಾಜ್ಯ

ಫೇಸ್ ಬುಕ್ ನಲ್ಲಿ ಮತ್ತೆ ಸಿಡಿದೆದ್ದ ಶೆಣೈ: '#ಪರಮೇಶಿಪ್ರೇಮಪ್ರಸಂಗ ಭಾಗ1#... ಸಿಡಿ ಬೇಕೋ, ಆಡಿಯೋ ಬೇಕೋ'

Lingaraj Badiger
ಬೆಂಗಳೂರು: ಕೂಡ್ಲಿಗಿ ಡಿವೈಎಸ್ಪಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಅವರು ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್ ಅವರ ವಿರುದ್ಧ ಫೇಸ್ ಬುಕ್ ಸಮರ ಸಾರಿದ್ದಾರೆ.
ಡಿವೈಎಸ್ಪಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ, ಪರಮೇಶ್ವರ ನಾಯಕ್ ಅವರೇ ನೀವು ಯಾವಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಿ ಎಂದು ಪ್ರಶ್ನಿಸಿದ್ದ ಅನುಪಮಾ ಶೆಣೈ ಅವರು ಈಗ ಮತ್ತೆ ಫೇಸ್ ಬುಕ್ ನಲ್ಲಿ ಹ್ಯಾಸ್ ಟ್ಯಾಗ್ ಲೈನ್ ಗೆ ಪ್ರತಿಕ್ರಿಯೆ ನೀಡಿದ್ದು, '#ಪರಮೇಶಿ ಪ್ರೇಮಪ್ರಸಂಗ ಭಾಗ-1#...ಸಿಡಿ ಬೇಕೋ, ಆಡಿಯೋ ಬೇಕೋ' ಎಂದು ಪ್ರಶ್ನಿಸಿದ್ದಾರೆ.
ಪರಮೇಶ್ವರ್ ನಾಯಕ್ ಅನುಪಮಾ ಶೆಣೈ ಅವರ ಜೊತೆ ಸಂಭಾಷಣೆ ನಡೆಸಿದಾಗ ಅಕ್ರಮ ಮದ್ಯ ಮಾರಾಟಗಾರರ ಪರವಾಗಿ ಲಾಬಿ ನಡೆಸಿದ್ದು, ಅಕ್ರಮಗಳಿಗೆ ಸಹಕರಿಸುವಂತೆ ತಾಕೀತು ಮಾಡಿದ್ದಾರೆ ಎಂಬ ಮಾಹಿತಿಗಳಿವೆ. ಇದಕ್ಕೆ ಪುಷ್ಠಿ ನೀಡುವಂತೆ ಈಗ ಶೆಣೈ ಅವರು ತಮ್ಮ ಜೊತೆ ಸಚಿವರು ದೂರವಾಣಿಯಲ್ಲಿ ನಡೆಸಿರುವ ಸಂಭಾಷಣೆಯನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಸಚಿವರಿಂದ ವರದಿ ಕೇಳಿದ ಸಿಎಂ
ಅನುಪಮಾ ಶೆಣೈ ರಾಜೀನಾಮೆ ನೀಡಿದ ನಂತರ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ತೀವ್ರ ಸ್ವರೂಪ ಪಡೆಯುತ್ತಿದೆ. ಎಂದಿನಂತೆ ಸಿದ್ದರಾಮಯ್ಯ ಸರ್ಕಾರ ಶೆಣೈ ರಾಜೀನಾಮೆಯನ್ನು ಸಾಮಾನ್ಯ ಪ್ರಕರಣ ಎಂದು ಕಡೆಗಣಿಸಿತ್ತು. ಯಾವಾಗ ಫೇಸ್‌ಬುಕ್‌ನಲ್ಲಿ ಸಮರ ಸಾರಿ ಶೆಣೈ ಅಖಾಡಕ್ಕಿಳಿದಿರೋ ಆಗ ಸರ್ಕಾರಕ್ಕೆ ಚುರುಕು ಮುಟ್ಟಿಸಿದಂತಾಗಿದೆ. ಪರಮೇಶ್ವರ್ ನಾಯಕ್ ತಮ್ಮೊಂದಿಗೆ ನಡೆಸಿರುವ ಸಂಭಾಷಣೆಯನ್ನು ಬಹಿರಂಗಗೊಳಿಸುವುದಾಗಿ ಶೆಣೈ ತಮ್ಮ ಆಪ್ತ ಬಣದಲ್ಲಿ ಹೇಳಿಕೊಂಡ ಬೆನ್ನಲ್ಲೇ ಮುಖ್ಯಮಂತ್ರಿ  ಸಿದ್ದರಾಮಯ್ಯ, ಪರಮೇಶ್ವರ್ ನಾಯಕ್ ಅವರಿಂದ ಪ್ರಕರಣದ ವರದಿ ಕೇಳಿದ್ದಾರೆ.
SCROLL FOR NEXT