ಬೆಂಗಳೂರು: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಡಿಮೆ ದರ್ಜೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿ ಕೆಲಸ ನಿರ್ವಹಿಸುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಚೆನ್ನೈನಲ್ಲಿ ಸಂಭವಿಸಿದ್ದ ಪ್ರವಾಹ ಸಂದರ್ಭದಲ್ಲಿ ಸಹಾಯದ ಹಸ್ತ ಚಾಚುವ ಮೂಲಕ ಔದಾರ್ಯ ಮೆರೆಯುವ ಮೂಲಕ ಹೆಸರು ಮಾಡಿತ್ತು.
ಕಳೆದ 40 ವರ್ಷಗಳ ಹಿಂದೆ ಸ್ಥಾಪಿಸಲಾದ ಈ ಸಂಸ್ಥೆ ರಾಜ್ಯದ ಕುಶಾಲ್ ನಗರ, ಬೆಟಮಂಗಲ (ಕೆಜಿಎಫ್), ಹುಬ್ಬಳ್ಳಿ-ಧಾರವಾಡ, ಮಂಡ್ಯ, ರಾಮನಗರ, ಚೆನ್ನಪಟ್ಟಣ, ಬೆಳಗಾವಿ, ವಿಜಯಪುರ, ಕಲಬುರ್ಗಿ, ಕಾರವಾರ-ಅಂಕೋಲ ಬಳ್ಳಾರಿ ಸೇರಿದಂದೆ 11 ಪ್ರದೇಶಗಳಲ್ಲಿ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಕ್ಕೆ ತರುವ ಮೂಲಕ ಕಾರ್ಯ ನಿರ್ವಹಿಸುತ್ತಿದೆ.
ನೀರು ಸರಬರಾಜು ಯೋಜನೆ ಕುರಿತಂತೆ ಮಾತನಾಡಿರುವ ಅಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು, ರಾಜ್ಯದ ಹಲವು ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತಂದಿರುವ ಯೋಜನೆಗಳ ಮೂಲಕ ಯಶಸ್ಸಿನ ಹಾದಿಯನ್ನು ಹಿಡಿದಿದ್ದೇವೆ. ದಂಡ, ಸಂಪರ್ಕಗಳ ಕಡಿತ ಹಾಗೂ ಅಕ್ರಮ ನೀರಿನ ಸಂಪರ್ಕಗಳ ಕಡಿತದ ಮಾಡುವ ಮೂಲಕ ನೀರಿನ ನಷ್ಟವನ್ನು ಶೇ.45 ರಿಂದ ಶೇ.35 ಕ್ಕೆ ಇಳಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ನೀರಿನ ಸಂರಕ್ಷಣೆಗಾಗಿ ಉನ್ನತ ತಂತ್ರಜ್ಞಾನಗಳನ್ನು ಬಳಸಿ ಪೈಪ್ ಗಳನ್ನು ಅಳವಡಿಸಲಾಗಿದೆ. ಹೊಸದಾಗಿ ನೀರಿನ ಸಂಪರ್ಕ ಪಡೆದವರಿಗೆ ಹೊಸ ತಂತ್ರಜ್ಞಾನ ಅಳವಡಿಸಿ ನೀರಿನ ನಷ್ಟವನ್ನು ಶೇ.50ರಷ್ಟನ್ನು ಕಡಿಮೆ ಮಾಡಿದ್ದೇವೆ. ಮೈಸೂರಿನಲ್ಲಿ ಈ ಹಿಂದೆ ಶೇ.45 ರಷ್ಟು ನೀರು ವ್ಯರ್ಥವಾಗುತ್ತಿದ್ದು, ಇದೀಗ ಇದರ ಪ್ರಮಾಣ ಶೇ.21 ಕ್ಕೆ ಇಳಿದಿದೆ.
ಕಲಬುರ್ಗಿಯಲ್ಲೂ ಮಂಡಳಿಯೇ ಕಾರ್ಯನಿರ್ವಹಿಸುತ್ತಿದ್ದು, ಇದೀಗ ನಮ್ಮ ಆದಾಯ ಈ ಹಿಂದಿಗಿಂತಲೂ ದುಪ್ಪಟ್ಟಾಗಿದೆ. ನೀರು ಸಂರಕ್ಷಣೆ ಮಾಡುವುದರಿಂದ ರು. 40 ಲಕ್ಷ ಆದಾಯದಿಂದ ರು.80 ಲಕ್ಷ ಆದಾಯ ಮಂಡಳಿಗೆ ಬರುತ್ತಿದೆ.
ಜನವರಿ ತಿಂಗಳಿಂದ ಮೇ ತಿಂಗಳವರೆಗೆ ನೀರು ಸರಬರಾಜು ಮಾಡುವುದು ಬಹಳ ಕಷ್ಟಕರವಾಗಿರುತ್ತದೆ. ಜನರ ಸಮಸ್ಯೆಗಳನ್ನು ಆಲಿಸಿ, ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ. ನೀರು ಸರಬರಾಜು ಮಾಡುವ ಸಮಯವನ್ನು ಕಡಿತಗೊಳಿಸಲಾಗಿದ್ದು, ದಿನನಿತ್ಯ 4.5 ಗಂಟೆಯಿಂದ 1 ಅಥವಾ 1.5 ಗಂಟೆಗೆ ಇಳಿಸಲಾಗಿದೆ. ಪ್ರತಿ ನಿತ್ಯ ಎಲ್ಲಾ ಮನೆಗಳಿಗೂ ನೀರು ಸರಬರಾಜಾಗುತ್ತಿದೆ ಎಂದು ಹೇಳಿದ್ದಾರೆ.
ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಪ್ರದರ್ಶಿಸಲಾಗುತ್ತಿದೆ. ಇದರ ಫಲಿತಾಂಶವನ್ನು ಎಲ್ಲರೂ ನೋಡಬಹುದು. ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಅಂತರಾಷ್ಟ್ರೀಯ ಗುತ್ತಿಗೆದಾರರನ್ನು ಬಳಸಿಕೊಳ್ಳಲಾಗುತ್ತಿದೆ. ಮಾಲೂರಿನಲ್ಲಿ ಭೂಗರ್ಭದ ಚರಂಡಿ ಯೋಜನೆಯಲ್ಲಿ ಪಾಸ್ಸವಂಟ್ ಎನರ್ಜಿ ಮತ್ತು ಎನ್ವಿರಾನ್ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಫ್ರಾನ್ಸ್) ಕಾರ್ಯನಿರ್ವಹಿಸುತ್ತಿವೆ.
2015-2016ನೇ ಆರ್ಥಿಕ ವರ್ಷದಲ್ಲಿ ರು.205 ಕೋಟಿ ವೆಚ್ಚದಲ್ಲಿ 21 ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ರು.2,615 ಕೋಟಿ ನೀಡಲಾಗಿದ್ದು, 22 ಯೋಜನೆಗಳು ಅಟಲ್ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣ ದೊರಕಿರುವುದು ಇದೇ ಮೊದಲು. ನಮ್ಮ ಶ್ರಮದಾಯಕ ಕೆಲಸದ ಪರಿಣಾಮ ಇಷ್ಟೊಂದ ಹಣ ದೊರಕಿದೆ.
ಮುಂದಿನ ಭವಿಷ್ಯದ ಯೋಜನೆ ಬಗ್ಗೆ ಚಿಂತನೆ ನಡೆಸಲಾಗಿದ್ದು, ಮುಂದಿನ ನಮ್ಮ ಯೋಜನೆ ಮೈಸೂರು, ತುಮಕೂರು ಮತ್ತು ಶಿವಮೊಗ್ಗಕ್ಕೆ 24*7 ನೀರು ಸರಬರಾಜು ಮಾಡುವುದಾಗಿದೆ. ಪ್ರವಾಸಿ ತಾಣವಾಗಿರುವ ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯದಂತಹ ಹಲವು ಪ್ರದೇಶಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳ ಕುರಿತಂತೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.