ರಾಜ್ಯ

ಬೆಳೆವಿಮೆಗಾಗಿ ಸರ್ಕಾರದಿಂದ ರು.693 ಕೋಟಿ ಬಿಡುಗಡೆ: ಕೃಷ್ಣ ಬೈರೇಗೌಡ

Shilpa D

ಬೆಂಗಳೂರು: 2015 ರಲ್ಲಿ ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಉಂಟಾದ ಬೆಳೆ ನಷ್ಟ ಪರಿಹಾರ ಮತ್ತು ರೈತರ ಬೆಳೆ ವಿಮೆ ಸೇರಿ ಸರ್ಕಾರ 693  ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಒಂದು ವಾರದಲ್ಲಿ ರೈತರ ಖಾತೆಗೆ ಹಣ ಜಮಾ ಆಗಲಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಮುಂಗಾರು ಪೂರ್ವ ಮತ್ತು ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಉಂಟಾದ ಬೆಳೆ ನಷ್ಟಕ್ಕೆ 1,770 ಕೋಟಿ ರೂ., ಹಿಂಗಾರು ಅವಧಿಯಲ್ಲಿ 12 ಜಿಲ್ಲೆಗಳಲ್ಲಿ ಉಂಟಾದ ಬೆಳೆ ನಷ್ಟಕ್ಕೆ 607 ಕೋಟಿ ರೂ. ಜಿಲ್ಲಾಧಿಕಾರಿಗಳ ಮೂಲಕ ಇನ್ನೊಂದು ವಾರದಲ್ಲಿ ರೈತರ ಖಾತೆಗೆ ಜಮಾ ಆಗಲಿದೆ ಎಂದರು.

ಬೆಳೆ ವಿಮೆಯ ರಾಜ್ಯದ ಪಾಲಿನ 693 ಕೋಟಿ ರೂ. ಹಣವನ್ನು ಕೃಷಿ ವಿಮಾ ನಿಗಮಕ್ಕೆ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾ ನೋಡಲ್‌ ಬ್ಯಾಂಕ್‌ಗಳ ಮೂಲಕ ನಾಲ್ಕೈದು ದಿನಗಳಲ್ಲಿ ರೈತರ ಖಾತೆಗೆ ವರ್ಗಾವಣೆ ಆಗಲಿದೆ. ಇದರಿಂದ ಸುಮಾರು 6.25 ಲಕ್ಷ ರೈತರಿಗೆ ಅನುಕೂಲವಾಗಲಿದೆ, ಹಿಂಗಾರು ಬೆಳೆ ನಷ್ಟದ 116 ಕೋಟಿ ರೂ. ಹಣ ಇನ್ನೂ ಕೇಂದ್ರ ಸರ್ಕಾರದಿಂದ ಬರಲಿದೆ ಎಂದು ಅವರು ತಿಳಿಸಿದರು.

ಈ ಹಿಂದೆ ಶೇ. 10ರಿಂದ 12ರಷ್ಟು ಮಾತ್ರ ರೈತರು ಬೆಳೆ ವಿಮೆ ಯೋಜನೆಗೆ ಒಳಪಡುತ್ತಿದ್ದರು. ಈಗ ಅದನ್ನು ಶೇ. 20ರಿಂದ 25ಕ್ಕೆ ಹೆಚ್ಚಿಸಿ ಈ ವರ್ಷ ಕನಿಷ್ಠ 15 ಲಕ್ಷ ರೈತರನ್ನು ಬೆಳೆ ವಿಮೆ ವ್ಯಾಪ್ತಿಗೆ ತರುವ ಗುರಿ ಇಟ್ಟುಕೊಳ್ಳಲಾಗಿದೆ.

ಹೊಸ ಯೋಜನೆಯಲ್ಲಿ ಒಂದಕ್ಕಿಂತ ಹೆಚ್ಚು ಕಡೆ ರೈತರು ಬೆಳೆ ವಿಮೆ ಮಾಡಿಸುವುದನ್ನು ತಡೆಗಟ್ಟಬಹುದು. ಅಲ್ಲದೇ ಬೆಳೆ ಇಳುವರಿ ನಿರ್ಧಾರ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ವ್ಯಾಪಕ ದೂರಗಳ ಹಿನ್ನೆಲೆಯಲ್ಲಿ ಜಿಪಿಎಸ್‌ ತಂತ್ರಜ್ಞಾನ ಬಳಸಿ ಟ್ಯಾಬ್‌ಗಳ ಮೂಲಕ ಬೆಳೆ ಇಳುವರಿ ಪತ್ತೆ ಹಚ್ಚುವ ವ್ಯವಸ್ಥೆ ಜಾರಿಗೆ ತರಲಾಗುವುದು ಕೃಷ್ಣ ಬೈರೇಗೌಡ ಇದೇ ವೇಳೆ ತಿಳಿಸಿದರು.

SCROLL FOR NEXT