ಪುತ್ತೂರು: ಪೂತ್ತೂರಿನ ರಾಜಧಾನಿ ಜ್ಯುವೆಲ್ಲರ್ಸ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.
ಮೊಹಮ್ಮದ್ ಹನೀಫ್ ಅಲಿಯಾಸ್ ಮುನ್ನಾ (34) ಬಂಧಿತ ಆರೋಪಿ. ಈ ಹಿಂದೆಯೇ ಹನೀಫ್ ವಿರುದ್ಧ ಬೆಂಗಳೂರು, ಉಲ್ಲಾಳ, ಕಾಸರಗೋಡು, ಕೊನಾಜೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ 7 ಪ್ರಕರಣಗಳು ದಾಖಲಾಗಿವೆ.
ಖಚಿತ ಮಾಹಿತಿ ಆಧಾರದ ಮೇಲೆ ಹನೀಫ್ ನನ್ನು ಬಂಧಿಸಲಾಗಿದೆ. ಬಂಧನಕ್ಕೊಳಪಡಿಸುವ ವೇಳೆ ಆರೋಪಿಯ ಬಳಿಯಿದ್ದ ಪಿಸ್ತೂಲೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಭೂಗತ ಪಾತಕಿ ಕಲಿ ಯೋಗೀಶ್ ಪ್ರಕರಣದ ಮೂಲ ಸೂತ್ರಧಾರನಾಗಿದ್ದಾನೆ. ಈತ ರಾಜಧಾನಿ ಜ್ಯುವೆಲರ್ಸ್ ಮಾಲೀಕರಿಗೆ ಫೋನ್ ಮಾಡಿ ಹಫ್ತಾ ಕೇಳಿದ್ದ. ಇದಕ್ಕೆ ಅಂಗಡಿ ಮಾಲೀಕರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಗುಂಡು ಹಾರಿಸಿ ಬೆದರಿಕೆ ಹುಟ್ಟಿಸುವ ತಂತ್ರ ರೂಪಿಸಿದ್ದ. ಯೋಜನೆಯ ಜವಾಬ್ದಾರಿಯನ್ನು ಕ್ರಿಮಿನಲ್ ಕಾಲಿಯಾ ರಫೀಕ್ ವಹಿಸಿದ್ದ. ರಫೀಕ್ ನಿಂದ ಸುಪಾರಿ ಪಡೆದಿದ್ದ ಆರೋಪಿ ಅಬ್ದುಲ್ ಆಸೀರ್ ಮತ್ತು ಅನ್ವರ್ ಕಳೆದ ಅಕ್ಟೋಬರ್ 6 ರಂದು ಸಂಜೆ ವೇಳೆ ಬೈಕ್ ನಲ್ಲಿ ಬಂದು ರಾಜಧಾನಿ ಜ್ಯುವೆಲ್ಲರ್ಸ್ ಮೇಲೆ ಮೂರು ಸುತ್ತಿನ ಗುಂಡು ಹಾರಿಸಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ಪೊಲೀಸರು ಇತ್ತೀಚೆಗಷ್ಟೇ ಅಬ್ದುಲ್ ಆಸಿರ್ ಮತ್ತು ಅನ್ವರ್ ನನ್ನು ಬಂಧಿಸಿದ್ದರು. ರಫೀಕ್ ನನ್ನು ವಿವಿಧ ಪ್ರಕರಣಗಳ ಸಂಬಂಧ ಕೇರಳ ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣ ಸಂಬಂಧ ಹನೀಫ್ ಎಂಬ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.