ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ಸೋಮವಾರ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸುತ್ತಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ವೇತನ ಭತ್ಯೆ, ಸಚಿವಾಲಯ ನೌಕರರಿಗೆ ಅಧಿವೇಶನದ ವೇಳೆ ವಿಶೇಷ ಭತ್ಯೆ ಹಾಗೂ ವಾಹನ ವ್ಯವಸ್ಥೆ, ಶಾಖಾಧಿಕಾರಿಗಳ ನೇರ ನೇಮಕಾತಿ ರದ್ದು ಹಾಗೂ ರಾಷ್ಟ್ರೀಯ ಪಿಂಚಣಿ ಯೇಜನೆ ರದ್ದು ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಸಚಿವಾಲಯ ಸಿಬ್ಬಂದಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಮಧ್ಯಾಹ್ನ 1.30ರ ಸುಮಾರಿಗೆ ವಿಧಾನಸೌಧ 3 ನೇ ಮಹಡಿಯಲ್ಲಿರುವ ಮುಖ್ಯ ಕಾರ್ಯದರ್ಶಿಗಳ ಕಚೇರಿ ಬಳಿ ಎಲ್ಲಾ ನೌಕರರು ಹಾಗೂ ಅಧಿಕಾರಿಗಳು, ತಮಗೂ ಸಹ ಕೇಂದ್ರ ಮಾದರಿ ವೇತನ ಭತ್ಯೆಗಳನ್ನು ನೀಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.