ಬೆಂಗಳೂರು: ಎರಡನೇ ಬಾರಿಗೆ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪರೀಕ್ಷೆ ಮುಂದೂಡಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು, ತುಮಕೂರು ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಸ್ಪೀಕರ್ ಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.
ಪ್ರಕರಣದಿಂದ ತೀವ್ರ ಕಂಗೆಟ್ಟಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಿಐಡಿಗೆ ರಾಜ್ಯದ ಮೂಲೆಮೂಲೆಗಳಿಂದ ಕರೆ ಮಾಡಿ ದೂರುಗಳನ್ನು ಸಲ್ಲಿಸುತ್ತಿದ್ದಾರೆ. ಪತ್ರಗಳ ಮೂಲಕ, ವಾಟ್ಸಾಪ್, ಇ-ಮೇಲ್ ಹಾಗೂ ಸಾಮಾಜಿಕ ತಾಣಗಳ ಮೂಲಕವೂ ಮಾಹಿತಿ ನೀಡುತ್ತಿದ್ದಾರೆ. ಪ್ರತಿ ವರ್ಷವೂ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿದೆ. ಈ ಅಕ್ರಮ ಜಾಲವನ್ನು ಬುಡಸಮೇತ ಕಿತ್ತು ಹಾಕುವಂತೆ ವಿನಂತಿಸಿರುವ ವಿದ್ಯಾರ್ಥಿ ಸಮುದಾಯ, ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಸಿಐಡಿ ಡಿಐಜಿ ಸೋನಿಯಾ ನಾರಂಗ್, ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ದೂರುಗಳು ಬರುತ್ತಿವೆ. ಪ್ರತಿಯೊಬ್ಬರು ನೀಡಿದ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ದಾಖಲು ಮಾಡಿಕೊಳ್ಳಲಾಗುತ್ತಿದೆ. ಇದು ತನಿಖೆಗೆ ತುಂಬಾ ಸಹಕಾರಿಯಾಗುತ್ತಿದ್ದು, ಮಾಹಿತಿದಾರರ ಹೆಸರು ಗೌಪ್ಯವಾಗಿಡಲಾಗಿದೆ ಎಂದು ಹೇಳಿದರು. ಸಿಐಡಿ ಎಸ್ಪಿ ಸಿರಿಗೌರಿ ನೇತೃತ್ವದಲ್ಲಿ 10 ವಿಶೇಷ ತಂಡಗಳನ್ನು ರಚಿಸಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಇದೇ ಮೊದಲ ಸಲವಲ್ಲ: ನಮ್ಮ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ಇದೇನು ಮೊದಲ ಸಲವಲ್ಲ. 2011, 2012ರಲ್ಲಿಯೂ ಸೋರಿಕೆಯಾಗಿತ್ತು. ಆದರೆ ಆಗ ಪ್ರಕರಣವನ್ನು ಇಲಾಖೆ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ವರ್ಷ ಎರಡೆರಡು ಬಾರಿ ಸೋರಿಕೆಯಾಗಿರುವುದರಿಂದ ರಾಜ್ಯ ಸರ್ಕಾರ ಮತ್ತು ಪಿಯು ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ. 2011ರಿಂದ 2015ರ ವರೆಗೆ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಬಂಧಿತರಾಗಿದ್ದ ಆರೋಪಿಗಳ ಚಲನವಲನ ಕುರಿತು ಸಿಐಡಿ ಮಾಹಿತಿ ಸಂಗ್ರಹಿಸುತ್ತಿದೆ.
ವ್ಯವಸ್ಥಿತ ಜಾಲ: ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ವ್ಯವಸ್ಥಿತ ಜಾಲದ ಕೈವಾಡವಿದೆ ಎಂದು ಶಂಕಿಸಲಾಗಿದೆ. ನಿವೃತ್ತ ಉಪನ್ಯಾಸಕರು, ಪಿಯು ಇಲಾಖೆ, ಟ್ಯುಟೋರಿಯಲ್ಸ್, ಖಜಾನೆ ಹಾಗೂ ಕೆಲ ಖಾಸಗಿ ಕಾಲೇಜಿನ ಆಡಳಿತ ಮಂಡಳಿಗಳು ಶಾಮೀಲಾಗಿರಬಹುದು ಎಂಬ ಶಂಕೆಯನ್ನು ಸಿಐಡಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಪಿಯು ಮಂಡಳಿ ಖಜಾನೆಯಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಐಡಿ ಮೂಲಗಳಿಂದ ತಿಳಿದು ಬಂದಿದೆ.