ಬೆಂಗಳೂರು: ಮುಂದಿನ 5 ವರ್ಷದಲ್ಲಿ ಬೆಂಗಳೂರು ವಾಸಯೋಗ್ಯವಲ್ಲದ ನಗರವಾಗಲಿದೆ ಎಂದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸಯನ್ಸ್ ತಮ್ಮ ಅಧ್ಯಯನ ವರದಿಯೊಂದರಲ್ಲಿ ಹೇಳಿದೆ.
ವರದಿಯ ಪ್ರಕಾರ ಕಳೆದ ನಾಲ್ಕು ದಶಕಗಳಲ್ಲಿ ಶೇ.525 ದಷ್ಟು ನಗರ ಬೆಳವಣಿಗೆ ಹೊಂದಿದ್ದು, ಕೃಷಿಯಲ್ಲಿ ಶೇ.78 ರಷ್ಟು ಮತ್ತು ಜಲಮೂಲಗಳಲ್ಲಿ ಶೇ.79 ಕುಸಿತ ಕಂಡು ಬಂದಿದೆ. ಅಂದರೆ ನಗರಾಭಿವೃದ್ಧಿಯ ನಾಗಾಲೋಟದಲ್ಲಿ ಇಲ್ಲಿನ ಜಲಮೂಲಗಳು, ಮರ ಗಿಡಗಳು ನಾಶವಾಗುತ್ತಾ ಬಂದಿದೆ.
ಇದೊಂದು ಅವಿವೇಕದ ಬೆಳವಣಿಗೆ ಎಂದು ಐಐಎಸ್‌ಸಿಯಲ್ಲಿನ ಸೆಂಟರ್ ಫಾರ್ ಇಕಾಲಾಜಿಕಲ್ ಸಯನ್ಸ್‌ನ ಪ್ರೊಫೆಸರ್ ಟಿವಿ ರಾಮಚಂದ್ರ ಹೇಳಿದ್ದಾರೆ.
ನಾವು ಉಣ್ಣುವ ಆಹಾರ ವಿಷಪೂರಕವಾಗಿದ್ದರೆ ನಾವು ಎಷ್ಟು ಸಂಪಾದನೆ ಮಾಡಿದರೇನು ಬಂತು?. ಇಲ್ಲಿ ಪೂರ್ವಪ್ರಜ್ಞೆಯಿಲ್ಲದ ನಗರೀಕರಣ ನಡೆಯುತ್ತಿರುವುದನ್ನು ನೋಡಿದರೆ ಮುಂಬರುವ 5 ವರ್ಷಗಳಲ್ಲಿ ಬೆಂಗಳೂರು ವಾಸಯೋಗ್ಯವಲ್ಲದ ಮೃತ ನಗರವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಹಿಂದೆ ಹೀಗಿರಲಿಲ್ಲ. ಇಲ್ಲಿನ ವಾತಾವರಣ ಇನ್ನಿತರ ನಗರಗಳಿಗೆ ಹೋಲಿಸಿದರೆ ಉತ್ತಮವಾಗಿತ್ತು. ಇಲ್ಲಿ ಭೂಮಿ ಸಿಗುತ್ತಿತ್ತು, ಆರ್ಥಿಕ ವ್ಯವಸ್ಥೆ ಮತ್ತು ದಕ್ಷ ರಾಜಕಾರಣವೂ ಇತ್ತು ಎಂದು ರಾಮಚಂದ್ರನ್ ಹೇಳುತ್ತಾರೆ.
ಅದೇ ವೇಳೆ ಇದಕ್ಕೆಲ್ಲ ಕಾರಣ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಎಂದು ನಗರ ತಜ್ಞ ಅಶ್ವಿನ್ ಮಹೇಶ್ ದೂರುತ್ತಾರೆ. ಭ್ರಷ್ಟ ರಾಜಕಾರಣಿಗಳಿಗೆ ಲಾಭವಾಗುವಂತೆ ಭೂ ವ್ಯವಹಾರ ಮಾಡಿಕೊಡುವ ಏಜೆನ್ಸಿಯಾಗಿ ಬಿಡಿಎ ಬದಲಾಗಿದೆ. ಬಿಡಿಎಯನ್ನೇ ಮುಚ್ಚಬೇಕು ಎಂದು ಜನರೂ ಆಗ್ರಹಿಸುತ್ತಿದ್ದಾರೆ ಎಂಬುದು ಅಶ್ವಿನ್ ಮಾತು.
ಅಭಿವೃದ್ಧಿಯ ಓಟದಲ್ಲಿ ಪರಿಸರ ಸಂಪತ್ತು ನಾಶವಾಗುವುದನ್ನು ನಿಯಂತ್ರಿಸುವ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಹೊಸ ಕಾರ್ಖಾನೆಗಳಿಗೆ ಇಲ್ಲಿ ನಿಷೇಧ ಹೇರುವುದರ ಜತೆಗೆ ಇನ್ನಿತರ ಜಿಲ್ಲೆಗಳಿಗೂ ಇಲ್ಲಿನ ಆರ್ಥಿಕ ಲಾಭ ದಕ್ಕುವಂತೆ ಮಾಡಬೇಕು.
ಸರ್ಕಾರದ ನಿರ್ಧಾರಗಳ ಮೇಲೆ ಖಾಸಗಿಯವರು ದಬ್ಬಾಳಿಕೆ ಮಾಡುತ್ತಿರುವುದನ್ನು ನೋಡಲು ಕಷ್ಟವೆನಿಸುತ್ತಿದೆ. ನಗರದಲ್ಲಿ ಶೇ. 15-20ರಷ್ಟು ತೆರೆದ ಪ್ರದೇಶಗಳಿರಬೇಕು ಎಂಬ ನಿಯಮವಿದ್ದರೂ ಇದನ್ಯಾರೂ ಪಾಲಿಸುವುದಿಲ್ಲ. ಜಲಮೂಲಗಳು, ಕಾಲುವೆಗಳನ್ನು ಕಿರಿದು ಮಾಡಲಾಗುತ್ತಿದೆ. ಈ ಸರ್ಕಾರ ಆದಷ್ಟು ಬೇಗ ಎಚ್ಚೆತ್ತು ಕೊಂಡು ಬೆಂಗಳೂರನ್ನು ವಾಸಯೋಗ್ಯ ನಗರವಾಗಿ ಉಳಿಸಿಕೊಳ್ಳುವ ಬಗ್ಗೆ ಮುತುವರ್ಜಿ ವಹಿಸಬೇಕೆಂದು ರಾಮಚಂದ್ರನ್ ಅಭಿಪ್ರಾಯ ಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics