ರಾಜ್ಯ

1 ಕೆಜಿ ಚಿನ್ನವನ್ನು ಗುದದ್ವಾರದಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ಮಹಿಳೆ ಬಂಧನ

Shilpa D

ಬೆಂಗಳೂರು:  1 ಕೆ.ಜಿ. ಬಂಗಾರವನ್ನು ಗುದದ್ವಾರದಲ್ಲಿಟ್ಟುಕೊಂಡು ಅಕ್ರಮ ಸಾಗಾಣಿಕೆಗೆ ಯತ್ನಿಸಿದ್ದ ಹೈದರಾಬಾದ್ ಮೂಲದ ಚಾಲಾಕಿ ಮಹಿಳೆಯನ್ನು  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸೀಮಾಸುಂಕ ಅಧಿಕಾರಿಗಳು ಬಂಧಿಸಿದ್ದಾರೆ.

ಹೈದರಾಬಾದ್‌ ಮೂಲದ ರಹೀಂ ಮುನ್ನಿಸಾ ಬಂಧಿತ ಮಹಿಳೆ. ದುಬೈನಿಂದ ಎಮಿರೇಟ್ಸ್ ಇಕೆ-506 ಮುಂಜಾನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಆಕೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿ ಮಹಿಳೆಯಿಂದ 35 ಲಕ್ಷ ರೂ. ಮೌಲ್ಯದ 1.17 ಕೆ.ಜಿ. ತೂಕದ 10 ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 6 ತಿಂಗಳ ಹಿಂದೆ ಮನೆಗೆಲಸದ ಸಲುವಾಗಿ ದುಬೈಗೆ ಹೋಗಿದ್ದ ರಹೀಂ ಮುನ್ನಿಸಾ, ಮಂಗಳವಾರ ಬೆಂಗಳೂರು ಮಾರ್ಗವಾಗಿ ಹೈದರಾಬಾದ್‌ಗೆ ತೆರಳಲು ಆಕೆ ಮುಂದಾಗಿದ್ದಳು.

ಅಕ್ರಮ ಚಿನ್ನ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು, ದುಬೈನಿಂದ ಮುಂಜಾನೆ 4 ಗಂಟೆಗೆ ಬಂದಿಳಿದ ರಹೀಂಳನ್ನು ತೀವ್ರ ತಪಾಸಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ ಎಂದು ಮೂಲಗಳು ಹೇಳಿವೆ.

ದುಬೈ ವಿಮಾನದಲ್ಲಿ ಸ್ಮಗ್ಲಿಂಗ್‌ ನಡೆದಿರುವ ಕುರಿತು ಸುಳಿವು ಸಿಕ್ಕಿತು. ಆಗ 4 ಗಂಟೆಗೆ ವಿಮಾನಕ್ಕೆ ಬಂದಿಳಿದ ಪ್ರಯಾಣಿಕರನ್ನು ಮೇಲೆ ನಿಗಾವಹಿಸಲಾಗಿತ್ತು. ಆ ವೇಳೆ ರಹೀಂ ಮುನ್ನಿಸಾ ನಡವಳಿಕೆಯೂ ಶಂಕೆ ಮೂಡಿಸಿತು. ಲೋಹ ಪರಿಶೋಧಕದಲ್ಲಿ ತಪಾಸಣೆಗೊಳಪಡದೆ ತಪ್ಪಿಸಿಕೊಳ್ಳಲು ಆಕೆ ಪ್ರಯತ್ನಿಸುತ್ತಿದ್ದಳು. ಇದರಿಂದ ಅನುಮಾನಗೊಂಡು ಆಕೆಯನ್ನು ವಶಕ್ಕೆ ಪಡೆದು ತಪಾಸಣೆಗೊಳಪಡಿಸಿದಾಗ ಗುದದ್ವಾರದಲ್ಲಿ ಬಂಗಾರ ಪತ್ತೆಯಾಯಿತು.

ಕಳೆದ ಫೆಬ್ರವರಿಯಲ್ಲಿ ಕೊಂಡೂರು ತುಳಸಮ್ಮ ಎಂಬ ಮಹಿಳೆ ವ್ಹೀಲ್ ಚೇರ್ ನಲ್ಲಿ 38 ಗೋಲ್ಡ್ ಬಿಸ್ಕಟ್ಸ್ ಗಳನ್ನು ಸಾಗಿಸುತ್ತಿದ್ದ ವೇಳೆ ಅನುಮಾನ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಸಿಕ್ಕಿಬಿದ್ದಿದ್ದಳು.  4 ಲಕ್ಷ ರು. ಕಮಿಷನ್ ಹಣಕ್ಕಾಗಿ ಮಹಿಳೆ ಈ ರೀತಿಯ ಕೆಲಸ ಮಾಡಿದ್ದಳು.

SCROLL FOR NEXT