ರಾಜ್ಯ

ಶೀಘ್ರದಲ್ಲೇ ಮನೆ ಬಾಗಿಲಿನಲ್ಲೇ ತೆರಿಗೆ ವಸೂಲಿ ಮಾಡಲಿದೆ ಬಿಬಿಎಂಪಿ

Manjula VN

ಬೆಂಗಳೂರು: ನಗರ ಜನತೆಯ ಮನೆ ಬಾಗಿಲಿಗೇ ಹೋಗಿ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ವಸೂಲಿ ಮಾಡಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಈಗಾಗಲೇ ಚಿಂತನೆ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು ಜನರ ಮನೆಯಲ್ಲಿ ಅಥವಾ ಅವರು ಕೆಲಸ ಮಾಡುವ ಸ್ಥಳಗಳಲ್ಲಿ ಆಸ್ತಿ ತೆರಿಗೆ ವಸೂಲಿ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಇದರಂತೆ ಐಟಿ-ಬಿಟಿ ಸಂಸ್ಥೆಗಳು ಹಾಗೂ ಕೈಗಾರಿಕಾ ಪ್ರದೇಶಗಳ ಮೇಲೂ ಬಿಬಿಎಂಪಿಯ ಕಣ್ಣು ಬಿದ್ದಿದ್ದು, ತೆರಿಗೆ ವಸೂಲಿ ಮಾಡಲಿದೆ ಎಂದು ತಿಳಿದುಬಂದಿದೆ.

ಇನ್ನು ಯೋಜನೆಯಂತೆ ಬಿಬಿಎಂಪಿ ಈ ವರ್ಷದಲ್ಲಿ 2,400 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡಲು ನಿರ್ಧರಿಸಿದೆ. ಈ ಕುರಿತಂತೆ ಮಾತನಾಡಿರುವ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಿವರಾಜು ಅವರು, ಬೆಂಗಳೂರು ನಗರ ಜನತೆ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಅವರಿಗೆ ಬ್ಯಾಂಕ್ ಗಳಿಗೆ ಹೋಗಿ ತೆರಿಗೆ ಕಟ್ಟುವ ಸಮಯವಿರುವುದಿಲ್ಲ. ಹೀಗಾಗಿ ತೆರಿಗೆ ಕಟ್ಟಲು ಆನ್ ಲೈನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೂ ಜನರು ಇದನ್ನು ಬಳಸಿಕೊಳ್ಳುತ್ತಿಲ್ಲ. ಹೀಗಾಗಿ ಮನೆಯ ಬಾಗಿಲಿಗೇ ಹೋಗಿ ತೆರಿಗೆ ವಸೂಲಿ ಮಾಡಲು ಚಿಂತನೆ ನಡೆಸಲಾಗಿದೆ. ತೆರಿಗೆ ವಸೂಲಿಯನ್ನು ವಾರಾಂತ್ಯದ ದಿನಗಳಲ್ಲಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಆರಂಭಿಕದಲ್ಲಿ ಒರಿಯನ್ ಮಾನ್ ಬಳಿಯಿರುವ ಬ್ರಿಗೇಡ್ ಗೇಟ್ ವೈ ಆಪಾರ್ಟ್ ಮೆಂಟ್ ಗಳಲ್ಲಿ ತೆರಿಗೆ ವಸೂಲಾತಿ ಕೆಲಸವನ್ನು ಆರಂಭಿಸಲಾಗುತ್ತಿದ್ದು, ನಂತರ ಐಟಿ-ಬಿಟಿ ಕಂಪನಿಗಳು ಹಾಗೂ ಕೈಗಾರಿಕಾ ಪ್ರದೇಶಗಳು, ಸರ್ಕಾರಿ ಕಚೇರಿಗಳಲ್ಲಿ ಮಾಡಲಾಗುತ್ತದೆ.

ಅಧಿಕಾರಿಗಳು ನೇರವಾಗಿ ಜನರ ಮನೆಗಳಿಗೆ ಹಾಗೂ ಕೆಲಸ ಮಾಡುವ ಕಂಪನಿಗಳಿಗೇ ಹೋಗಿ ತೆರಿಗೆ ವಸೂಲಿಮಾಡುತ್ತಾರೆ. ಈ ಬಗ್ಗೆ ಕೈಗಾರಿಕಾ ಪ್ರದೇಶಗಳಿಗೆ ಸಂಬಂಧಪಟ್ಟ ಸಂಘಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಜನರ ಅನುಕೂಲಕ್ಕೆ ತಕ್ಕಂತೆ ತೆರಿಗೆ ವಸೂಲಿ ಮಾಡಲಾಗುತ್ತದೆ.

ತೆರಿಗೆ ವಸೂಲಿ ನಂತರ ಚಲನ್ ನ್ನು ನೀಡಲಾಗುತ್ತದೆ. ತೆರಿಗೆ ವಸೂಲಾತಿ ಕಾರ್ಯ ಜೂನ್ ತಿಂಗಳ ಮೊದಲ ವಾರದಲ್ಲಿ ಆರಂಭವಾಗಲಿದ್ದು, ಇದಕ್ಕಾಗಿ ಸ್ಥಳೀಯ ಪುರಸಭಾಧ್ಯಕ್ಷರು ಹಾಗೂ ಶಾಸಕರ ಸಹಾಯವನ್ನು ಕೇಳಲಾಗಿದೆ. ಈ ಬಗೆಗಿನ ಮಾಹಿತಿ ಜನರಿಗೆ ತಲುಪಿಸುವ ಸಲುವಾಗಿ ಪಾಲಿಕೆ ಜನರಿಗೆ ಸಂದೇಶ ಹಾಗೂ ಕರಪತ್ರಗಳನ್ನು ನೀಡಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಅಧಿಕಾರಕ್ಕೆ ಬಂದ ನಂತರ ವಿಶೇಷ ತೆರಿಗೆ ವಸೂಲಾತಿಯನ್ನು ಮಾಡಲಾಗುತ್ತಿದ್ದು, ವಾರತ ಪ್ರತೀ ಬುಧವಾರದಂದು ಈ ತೆರಿಗೆಯನ್ನು ವಸೂಲು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

SCROLL FOR NEXT