ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ರಜೆ ಪಡೆಯಲ್ಲ ಎಂದು ಪೊಲೀಸರಿಂದ ಬಲವಂತದಿಂದ ಸಹಿ?

ವೇತನ ಹೆಚ್ಚಳ, ತಾರತಮ್ಯ ಹಾಗೂ ಇನ್ನಿತರೆ ಬೇಡಿಕೆಗಳ ಈಡೇರಿಕೆಗಾಗಿ ಪೊಲೀಸರು ನಡೆಸಲು ತೀರ್ಮಾನಿಸಿರುವ ಸಾಮೂಹಿಕ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಲು ಭಾರೀ ಕಸರತ್ತು ನಡೆಸಿರುವ ಅಧಿಕಾರಿಗಳು ಇದೀಗ ರಜೆ ಪಡೆಯಲ್ಲ...

ರಜೆ ಪಡೆಯಲ್ಲ ಎಂದು ಪೊಲೀಸರಿಂದ ಬಲವಂತದಿಂದ ಸಹಿ?
Manjula VN
Updated On : 1 Jun 2016, 10:28 am

ಬೆಂಗಳೂರು: ವೇತನ ಹೆಚ್ಚಳ, ತಾರತಮ್ಯ ಹಾಗೂ ಇನ್ನಿತರೆ ಬೇಡಿಕೆಗಳ ಈಡೇರಿಕೆಗಾಗಿ ಪೊಲೀಸರು ನಡೆಸಲು ತೀರ್ಮಾನಿಸಿರುವ ಸಾಮೂಹಿಕ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಲು ಭಾರೀ ಕಸರತ್ತು ನಡೆಸಿರುವ ಅಧಿಕಾರಿಗಳು ಇದೀಗ ರಜೆ ಪಡೆಯಲ್ಲ ಎಂದು ಸಿಬ್ಬಂದಿಯಿಂದ ಬಲವಂತದಿಂದ ಸಹಿ ಮಾಡಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.

ಜೂನ್ 4 ರಂದು ರಜೆ ನೀಡುವಂತೆ ಸಿಬ್ಬಂದಿಗಳು ಸಾಮೂಹಿಕ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಪ್ರತಿಭಟೆ ನಡೆಸಲು ತೀರ್ಮಾನಿಸಿರುವ ಶನಿವಾರದಂದು ಯಾರೊಬ್ಬ ಸಿಬ್ಬಂದಿಗೂ ರಜೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಅಧಿಕಾರಿಗಳ ಈ ಸೂಚನೆ ಹಿನ್ನೆಲೆಯಲ್ಲಿ ಠಾಣಾಧಿಕಾರಿಗಳು ಇದೀಗ ಸಿಬ್ಬಂದಿಯಿಂದ ಶನಿವಾಕ ತಾವು ರಜೆ ಪಡೆಯವುದಿಲ್ಲ ಎಂದು ಪತ್ರವನ್ನು ಬರೆದು ಅದಕ್ಕೆ ಸಹಿ ಹಾಕಿಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಪೇದೆಯೊಬ್ಬರು, ಠಾಣಾಧಿಕಾರಿಗಳು ಇದ್ದಕ್ಕಿದ್ದಂತೆ ಪತ್ರವೊಂದಕ್ಕೆ ಸಹಿ ಮಾಡುವಂತೆ ತಿಳಿಸಿದರು. ಪತ್ರವನ್ನು ಓದುವುದಕ್ಕೂ ಬಿಡಲಿಲ್ಲ ಎಂದು ಹೇಳಿದ್ದಾರೆ.

ಇನ್ನು ಆರೋಗ್ಯ ತೊಂದರೆ ಹಾಗೂ ಇನ್ನಿತರೆ ತೊಂದರೆಗಳಿಂದಾಗಿ ಈಗಾಗಲೇ ರಜೆಯಲ್ಲಿರುವ ಸಿಬ್ಬಂದಿಗಳಿಗೂ ಇದೀಗ ಇಲಾಖೆ ಪ್ರತಿಭಟನಾ ದಿನ ಠಾಣೆಗೆ ಬರುವಂತೆ ಸೂಚಿಸಿದ್ದು, ಆರೋಗ್ಯ ತೊಂದರೆ ಇರುವವರು ಠಾಣೆಗೆ ಬಂದು ವಿಶ್ರಾಂತಿ ಪಡೆಯುವಂತೆ ಸೂಚಿಸಿದೆ. ಅಲ್ಲದೆ, ಠಾಣೆಯಲ್ಲಿ ಏನಾದರೂ ಆರೋಗ್ಯದಲ್ಲಿ ಏರುಪೇರಾದರೆ ನಾವೇ ಆಸ್ಪತ್ರೆಗೆ ಕರೆದೊಯ್ಯುತ್ತೇವೆಂದು ಹೇಳಿದೆ ಎಂದು ಹೇಳಲಾಗುತ್ತಿದೆ.

ಸಹಾಯಕ ಪೊಲೀಸ್ ಆಯುಕ್ತರು ನಮ್ಮ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದಾರೆ. ಆದರೆ, ಆಯುಕ್ತ ವಜಾ ಹಾಗೂ ಕಠಿಣ ಕ್ರಮ ತೀರ್ಮಾನದಿಂದಾಗಿ ಬಹಿರಂಗವಾಗಿ ಬೆಂಬಲ ನೀಡಲು ಹೆದರುತ್ತಿದ್ದಾರೆಂದು ಪೇದೆಯೊಬ್ಬರು ಹೇಳಿದ್ದಾರೆ.

ಹುದ್ದೆಗೆ ಸೇರ್ಪಡೆಗೊಂಡಾಗಿನಿಂದಲೂ ಕೇವಲ ಒಂದು ಬಾರಿಯಷ್ಟೇ ಬಡ್ತಿಯನ್ನು ಪಡೆದಿದ್ದೇನೆ. ಇಲಾಖೆಯಲ್ಲಿ 35 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದೇನೆ. ಪೇದೆಯಿಂದ ಮುಖ್ಯ ಪೇದೆಯಾಗಿಯಷ್ಟೇ ಬಡ್ತಿಯನ್ನು ಪಡೆದಿದ್ದೇನೆ. ಈ ವರೆಗೂ ನನ್ನ ವೇತವನ್ನು ರು.600 ಅಷ್ಟೇ ಹೆಚ್ಚಿಸಲಾಗಿದೆ ಎಂದು ಮುಖ್ಯಪೇದೆಯೊಬ್ಬರು ಹೇಳಿದ್ದಾರೆ.

ಇನ್ನು ಇಲಾಖೆ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಉಪ ಆಯುಕ್ತ ಎನ್. ಸತೀಶ್ ಕುಮಾರ್ ಅವರು ತಳ್ಳಿಹಾಕಿದ್ದು, ಪ್ರತಿಭಟನೆ ದಿನದಂದು ಮಾತ್ರ ರಜೆಗೆ ಮನವಿ ಸಲ್ಲಿಸಿದವರ ಮನವಿಯನ್ನು ತಿರಸ್ಕರಿಸಲಾಗಿದೆ. ಯಾವುದೇ ಪತ್ರಕ್ಕೆ ಸಹಿ ಹಾಕುವಂತೆ ಸಿಬ್ಬಂದಿಗಳನ್ನು ಬಲವಂತ ಮಾಡಿಲ್ಲ ಎಂದು ಹೇಳಿದ್ದಾರೆ.

ಇದರಂತೆ ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರೀಕ್ ಕೂಡ ಆರೋಪವನ್ನು ತಿರಸ್ಕರಿಸಿದ್ದು, ಶನಿವಾರ ರಜೆಗೆ ಮನವಿ ಸಲ್ಲಿಸಿದವರ ಮನವಿಯನ್ನು ಮಾತ್ರ ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement