ಬೆಂಗಳೂರು: ಕಳೆದ ಏಪ್ರಿಲ್ ನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಸುಮಾರು 457 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿದಿನ ಕನಿಷ್ಠ ಇಬ್ಬರು ರೈತರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಹಾವೇರಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಸಾವಿಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. ಹಾವೇರಿಯಲ್ಲಿ 48, ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ 34 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
2015-16 ರಲ್ಲಿ 1,475 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿತ್ತು. ಇದು ಇತ್ತೀಚಿನ ವರ್ಷಗಳಲ್ಲೇ ಅತಿ ಹೆಚ್ಚು ರೈತರು ಸಾವಿಗೆ ಶರಣಾಗಿರುವ ವರ್ಷವಾಗಿತ್ತು. 2013-14 ರಲ್ಲಿ 58 ಮಂದಿ ರೈತರು, 2012-13ರಲ್ಲಿ 77 ಮಂದಿ ರೈತರು ಸಾವನ್ನಪ್ಪಿದ್ದರು.
ಆತ್ಮಹತ್ಯೆಗೆ ಶರಣಾದ ಕೆಲವೊಂದು ರೈತರ ಕುಟುಂಬಗಳಿಗೆ ಪರಿಹಾರ ಸಿಕ್ಕಿದೆ, ಇನ್ನೂ ಕೆಲವು ಕುಟುಂಬಗಳಿಗೆ ಸಿಕ್ಕಿಲ್ಲ, ಎಲ್ಲಾ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೃಷಿ ಇಲಾಖೆ ಹೇಳಿದೆ.
ರೈತನೊಬ್ಬ ಅಂಗೀಕೃತ ಬ್ಯಾಂಕ್ ಅಥವಾ ಲೇವಾದೇವಿ ವ್ಯವಹಾರಗಾರರಿಂದ ಕೃಷಿಗಾಗಿ ಸಾಲ ಪಡೆದು ಅದನ್ನು ವಾಪಸ್ ತೀರಿಸಲಾಗದೇ ಸಾವಿಗೆ ಶರಣಾದರೇ ಅಂಥಹ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತದೆ. ಒಂದು ವೇಳೆ ಮಾನ್ಯತೆ ಪಡೆದಿಲ್ಲದ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದರೇ ಅದಕ್ಕೆ ಕೃಷಿ ಇಲಾಖೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದುವರೆಗೂ ನಡೆದ 457 ರೈತರ ಆತ್ಮಹತ್ಯೆ ಪ್ರಕರಣದಲ್ಲಿ, ಪರಿಹಾರಕ್ಕಾಗಿ ಬಂದ 210 ಅರ್ಜಿಗಳನ್ನು ಅಂಗೀಕರಿಸಲಾಗಿದೆ, ಅದರಲ್ಲಿ ಅರ್ಜಿಗಳು ತಿರಸ್ಕೃತಗೊಂಡಿವೆ, ಇನ್ನೂ 173 ಕೇಸುಗಳು ಪರಿಹಾರ ನೀಡದೆ ಹಾಗೆಯೇ ಉಳಿದುಕೊಂಡಿವೆ.
2015-16 ನೇ ಸಾಲಿನಲ್ಲಿ 1,475 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 986 ಅರ್ಜಿಗಳು ಅಂಗೀಕೃತಗೊಂಡಿದ್ದು, 463 ಪರಿಹಾರ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಧನ ನೀಡಲಾಗುವುದು, ಮೃತ ರೈತನ ಪತ್ನಿಗೆ ಮಾಸಿಕ 2 ಸಾವಿರ ಪಿಂಚಣಿ ನೀಡಲಾಗುತ್ತದೆ, ಜೊತೆಗೆ ಮೃತ ರೈತನ ಮಕ್ಕಳಿಗೆ ಸ್ನಾತಕೋತ್ತತ ಪದವಿವರೆಗೂ ಉಚಿತ ಶಿಕ್ಷಣದ ಜೊತೆಗೆ ಹಲವು ಆರೋಗ್ಯ ಸಂಬಂಧಿ ಯೋಜನೆಗಳ ಲಾಭ ಪಡೆಯಬಹುದಾಗಿದೆ.