ರಾಜ್ಯ

ನಟ ದರ್ಶನ್ ಮನೆ ತೆರವಿಗೆ ಹೈಕೋರ್ಟ್ ತಡೆ

Lingaraj Badiger
ಬೆಂಗಳೂರು: ರಾಜಾ ಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಿಸಿರುವ ಆರೋಪ ಎದುರಿಸುತ್ತಿರುವ ನಟ ದರ್ಶನ್ ತೂಗುದೀಪ್‌ ಅವರ ಮನೆ ತೆರವಿಗೆ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ಕಳೆದ ಶನಿವಾರ ದರ್ಶನ್ ಮನೆಯ ಗೋಡೆಯ ಮೇಲೆ 'ಇದು ಕರ್ನಾಟಕ ಸರ್ಕಾರದ ಸ್ವತ್ತು' ಎಂದು ಜಿಲ್ಲಾಡಳಿತ ಬರೆದಿತ್ತು. ಜಿಲ್ಲಾಡಳಿತದ ಈ ಕ್ರಮವನ್ನು ಪ್ರಶ್ನಿಸಿ ದರ್ಶನ್ ಅವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರು, ಪ್ರಕರಣದ ವಿಚಾರಣೆ ಮುಗಿಯುವವರೆಗೆ ಯತಾಸ್ಥಿತಿ ಕಾಪಾಡುವಂತೆ ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ಬಡಾವಣೆಯಲ್ಲಿರುವ ದರ್ಶನ್‌ ಅವರ ಮನೆಯೂ ಸೇರಿದಂತೆ ಒಟ್ಟು ಎಂಟು ಮನೆಗಳನ್ನು ಜಿಲ್ಲಾಡಳಿತ ಶನಿವಾರ ವಶಪಡಿಸಿಕೊಂಡಿತ್ತು.
ಮನೆ ತೆರವುಗೊಳಿಸುವಂತೆ ತಹಸೀಲ್ದಾರ್‌ ನೀಡಿರುವ ನೋಟಿಸ್‌ ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಪಡಿಸಬೇಕು. ಹಾಗೆಯೇ, ಅರ್ಜಿ ಇತ್ಯರ್ಥವಾಗುವವರೆಗೆ ನೋಟಿಸ್‌ ಮತ್ತು ತಮ್ಮ ಮನೆಯನ್ನು ಸರ್ಕಾರ ವಶಕ್ಕೆ ಪಡೆಯುವುದಕ್ಕೆ ಹಾಗೂ ನೆಲಸಮಗೊಳಿಸುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ದರ್ಶನ್ ಕೋರ್ಟ್ ಗೆ ಮನವಿ ಮಾಡಿದ್ದರು.
SCROLL FOR NEXT