ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಶುಕ್ರವಾರವಷ್ಟೇ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವ ಕುರಿತಂತೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಕಾವೇರಿ ವಿವಾದ ಕುರಿತಂತೆ ವಿಚಾರಣೆ ನಡೆಸಿದ್ದ ಸುಪ್ರೀಂ, 'ಬದುಕಿ ಮತ್ತು ಬದುಕಲು ಬಿಡಿ' ಎಂಬ ತತ್ವದ ಮೇಲೆ ನಂಬಿಕೆಯಿಡಿ. ಕಾವೇರಿ ನೀರನ್ನು ನೀವೂ ಬಳಸಿ, ತಮಿಳುನಾಡಿಗೂ ನೀಡಿ. ನೀರಿನ ವಿವಾದದಲ್ಲಿ ಎರಡೂ ರಾಜ್ಯಗಳು ಪರಸ್ಪರ ಸಹಕಾರ ನೀಡಬೇಕಿದ್ದು, .ತಮಿಳುನಾಡಿನಲ್ಲಿ ಬೆಳೆಗೆ ನೀರು ಕಡಿಮೆಯಾಗಿರುವಾಗ ಕರ್ನಾಟಕ ನೀರನ್ನು ಬಿಡುಗಡೆ ಮಾಡಬೇಕೆಂದು ಹೇಳಿತ್ತು. ಆದರೆ, ಎಷ್ಟು ನೀರು ಬಿಡಬೇಕೆಂಬುದರ ಕುರಿತಂತೆ ಯಾವುದೇ ನಿರ್ದೇಶನ ನೀಡದೆ, ಈ ಕುರಿತ ನಿರ್ಧಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿ, ನ್ಯಾಯಾಲಯಕ್ಕೆ ಮಾಹಿತಿ ತಿಳಿಸುವಂತೆ ಹೇಳಿತ್ತು.
ಈ ಕುರಿತಂತೆ ಮಾತನಾಡಿರುವ ರಾಜ್ಯ ಸರ್ಕಾರದ ಪರ ವಕೀಲ ಮೋಹನ್ ಕಟರ್ಕಿ ಅವರು, ನ್ಯಾಯಾಲಯದ ಆದೇಶವನ್ನು ಗೌರವಿಸಬೇಕಿದ್ದು, ಆದೇಶದಂತೆ ರಾಜ್ಯ ಸರ್ಕಾರ ನೀರು ಬಿಡಲು ಪ್ರಯತ್ನ ಮಾಡಲಿದೆ ಎಂದು ಹೇಳಿದ್ದಾರೆ.
ಹಿರಿಯ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ತಮಿಳುನಾಡಿಗೆ ನೀರು ಬಿಡುವುದನ್ನು ರಾಜ್ಯ ಸರ್ಕಾರವೇನೂ ನಿಲ್ಲಿಸಿಲ್ಲ. ಪ್ರತಿದಿನ ತಮಿಳುನಾಡಿಗೆ 4 ಸಾವಿರ ಕ್ಯೂಸೆಕ್ಸ್ ನೀರನ್ನು ಕೆಆರ್ ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಬಿಡುಗಡೆ ಮಾಡುತ್ತಿದೆ. ಆದರೆ, ಸುಪ್ರೀಂ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನೀರಿನ ಪ್ರಮಾಣವನ್ನು ಮತ್ತಷ್ಟು ಹೆಚ್ಚು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಮಾನ್ಸೂನ್ ಮಳೆ ಕೈಕೊಟ್ಟಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಶೇ.45 ರಷ್ಟು ಕಡಿಮೆ ಮಳೆಯಾಗಿದೆ. ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಸಮಸ್ಯೆಯನ್ನು ಎದುರಿಸುತ್ತಿದೆ. ಕಾವೇರಿ ನದಿ ನೀರನ್ನೇ ನಂಬಿಕೊಂಡಿರುವ ರೈತರಿಗೂ ಈಗಾಗಲೇ ಕೃಷಿ ಕ್ಷೇತ್ರಕ್ಕೆ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಈ ಬಾರಿ ನೀರಿನ ಅಭಾವ ಹೆಚ್ಚಾಗಿದ್ದು, ಕುಡಿಯುವ ನೀರಿಗೂ ತೊಂದರೆಯುಂಟಾಗಲಿದೆ ಎಂದು ಹೇಳಲಾಗುತ್ತಿದೆ.