ಉಡುಪಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ನ್ಯಾಯಾಧಿಕರಣದಲ್ಲಿ ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.
ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ನ್ಯಾಯಾಧಿಕಾರಣದಲ್ಲಿ ವಿಚಾರಣೆ ನಡೆಯುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಲಿ ಎಂಬ ಒತ್ತಾಯದಲ್ಲಿ ಅರ್ಥವಿಲ್ಲ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಠಮಾರಿ ಹೆಣ್ಣು, ಅವರ ಕ್ಯಾತೆ ಸಹಿಸಲು ಸಾಧ್ಯವಿಲ್ಲ ಎಂದು ಸದಾನಂದ ಗೌಡ ಹೇಳಿದ್ದಾರೆ.
ಕುಡಿಯುವ ನೀರಿಗೆ ಸಮಸ್ಯೆಯಾಗಬಾರದೆಂದು ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡುವಂತೆ ನ್ಯಾಯಾಧಿಕರಣ ಆದೇಶಿಸಿದೆ. ಆದರೆ ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದು, ಕೆಎಸ್ ಆರ್ ಗೆ ತಜ್ಞರ ತಂಡ ಭೇಟಿ ನೀಡಿ ವರದಿ ನೀಡುವವರೆಗೂ ತಮಿಳುನಾಡಿಗೆ ನೀರು ಬಿಡುವುದು ಬೇಡ ಎಂದಿದ್ದಾರೆ. ಇನ್ನು ಕಾವೇರಿ ವಿವಾದದಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿರುವ ಫಾಲಿ.ಎಸ್ ನಾರಿಮನ್ ಅವರನ್ನು ಸಮರ್ಥಿಸಿಕೊಂಡಿರುವ ಸದಾನಂದ ಗೌಡರು, ನಾರಿಮನ್ ಅದ್ಭುತ ವಕೀಲರಾಗಿದ್ದು ಅವರು ರಾಜ್ಯದ ಹಿತ ಕಾಪಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.