ಬೆಂಗಳೂರು: ಊಟ ಬಡಿಸಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನೇ ಇರಿದುಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ವಿಭಾಗದ 31 ವರ್ಷದ ಉದ್ಯೋಗಿ ರಾಜು ತನ್ನ ಪತ್ನಿ ಸುಪ್ರೀತಾಳನ್ನು ಇರಿದು ಕೊಂದಿದ್ದಾನೆ.
ಬುಧವಾರ ರಾತ್ರಿ 9.30 ರ ಸಮಯದಲ್ಲಿ ಘಟನೆ ಬೆಳಕಿಗೆ ಬಂದಿದೆ. ಹಸಲೂರಿನಲ್ಲಿರುವ ಮನೆಯಲ್ಲಿ ಸುಪ್ರೀತಾ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮೊದಲಿಗೆ ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಜು ಹೇಳಿದ್ದ, ನಂತರ ವಿಚಾರಣೆ ವೇಳೆ ತಾನೇ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಸುಪ್ರಿತಾಳ ಕುತ್ತಿಗೆಯ ಮೇಲೆ 19 ಬಾರಿ ಚಾಕುವಿನಿಂದ ಇರಿದ ಗುರುತುಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ ರಾಜು ಮನೆಗೆ ಬಂದಾಗ ಸುಪ್ರಿತಾ ಮಲಗಿದ್ದಳು. ಊಟ ಬಡಿಸಲಿಲ್ಲವೆಂಬ ಕಾರಣಕ್ಕೆ ಆಕ್ರೋಶಗೊಂಡ ರಾಜು ಆಕೆಯ ಕೂದಲು ಹಿಡಿದು ಎಳೆದು ತಂದು ಅಡುಗೆ ಮನೆಯ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.