ರಾಜ್ಯ

ಲಾರಿ ಮುಷ್ಕರ ಎಫೆಕ್ಟ್: ತರಕಾರಿ, ಬೇಳೆ-ಕಾಳು ಪೂರೈಕೆಯಲ್ಲಿ ಭಾರಿ ವ್ಯತ್ಯಯ

Srinivasamurthy VN

ಬೆಂಗಳೂರು: ವಾಹನಗಳ ವಿಮಾ ದರ ಏರಿಕೆ ಖಂಡಿಸಿ ಕಳೆದ 6 ದಿನಗಳಿಂದ ಲಾರಿ ಮಾಲಿಕರ ಸಂಘಟನೆ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಲಾರಿ ಮುಷ್ಕರದಿಂದಾಗಿ ನಗರಕ್ಕೆ ಆಗಮಿಸಬೇಕಿದ್ದ ತರಕಾರಿ ಮತ್ತು  ಬೇಳೆಕಾಳುಗಳ ಪೂರೈಕೆಯಲ್ಲಿ ಭಾರಿ ವ್ಯತ್ಯವಾಗಿದೆ.

ಕೇಂದ್ರ ಸರ್ಕಾರದ ವಾಹನಗಳ ವಿಮೆ ದರ ಹೆಚ್ಚಳವನ್ನು ಖಂಡಿಸಿ ದಕ್ಷಿಣ ಭಾರತ ಮೋಟಾರ್ ವಾಹನ ಸಾರಿಗೆ ಅಸೋಸಿಯೇಷನ್ (ಎಸ್ ಐಎಂಟಿಎ) ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಅಗತ್ಯ ವಸ್ತುಗಳ  ಪೂರೈಕೆಯಲ್ಲಿ ಶೇ.50ರಷ್ಟು ಕುಸಿದಿದೆ ಎಂದು ತಿಳಿದುಬಂದಿದೆ. ಬೆಂಗಳೂರು ಸಗಟು ಆಹಾರ ಧಾನ್ಯ ಮತ್ತು ಬೇಳೆಕಾಳುಗಳು ಮಾರಾಟಗಾರರ ಸಂಘಟನೆಯ ಅಧ್ಯಕ್ಷ ರಮೇಶ್ ಚಂದ್ರ ಲಹೋತಿ ಅವರು ಹೇಳುವಂತೆ. ಈರುಳ್ಳಿ  ಮತ್ತು ಆಲೂಗೆಡ್ಡೆಯನ್ನು ಹೊರತು ಪಡಿಸಿ ಮಾರುಕಟ್ಟೆಗೆ ಆಗಮಿಸುವ ಬಹುತೇಕ ಎಲ್ಲ ಬಗೆಯ ತರಕಾರಿ ಮತ್ತು ಬೇಳೆಕಾಳುಗಳ ಪೂರೈಕೆಯಲ್ಲಿ ಶೇ.50ರಷ್ಟು ಕುಸಿದಿದೆ. ಸಕ್ಕರೆ, ಬೆಲ್ಲ ಮತ್ತು ಬೇಳೆಕಾಳಗಳಿಗೆ ಈಗಾಗಲೇ ಬೇಡಿಕೆ  ಹೆಚ್ಚಾಗಿದ್ದು, ಬೇಡಿಕೆ ಪೂರೈಸಲಾಗದೇ ದರ ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಮುಖವಾಗಿ ಯಶವಂತ ಪುರ ಎಪಿಎಂಸಿ ಮಾರುಕಟ್ಟೆಗೆ ಲಾರಿಮುಷ್ಕರದಿಂದಾಗಿ ವ್ಯಾಪಕ ಹೊಡೆತ ಬಿದ್ದಿದ್ದು, ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದ ಬೇಳೆಕಾಳುಗಳ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ  ನಡುವೇ ಮುಷ್ಕರ ಇತರೆ ರಾಜ್ಯಗಳಿಗೂ ವ್ಯಾಪಿಸುತ್ತಿದ್ದು, ಚೆನ್ನೈ, ಪುದುಚೇರಿಯಿಂದ ಆಗಮಿಸತ್ತಿದ್ದ ಲಾರಿಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರ ಮಾಹಿತಿ ನೀಡಿದರು.

ಪ್ರತಿಭಟನೆಗೆ ನಮ್ಮ ಬೆಂಬಲವಿದೆಯಾದರೂ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ: ಪೆಟ್ರೋಲ್ ಟ್ಯಾಂಕರ್ ಮಾಲೀಕರ ಸಂಘ
ಇನ್ನು ಲಾರಿ ಮುಷ್ಕರಕ್ಕೆ ಪೆಟ್ರೋಲ್ ಟ್ಯಾಂಕರ್ ಮಾಲೀಕರ ಸಂಘ ಬೆಂಬಲ ನೀಡಿದೆಯಾದರೂ, ಅಧಿಕೃತವಾಗಿ ತಾವು ಮುಷ್ಕರದಲ್ಲಿ ಪಾಲ್ಗೊಳ್ಳುವುದಿಲ್ಲ. ಪ್ರಸ್ತುತ ನಗರದಲ್ಲಿ ಪೆಟ್ರೋಲ್ ಟ್ಯಾಂಕರ್ ಗಳು ಎಂದಿನಂತೆ  ಸಂಚರಿಸುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಸದ್ಯದ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೇಳುವುದಾದರೆ ಪ್ರಸ್ತುತ ಟ್ಯಾಂಕರ್ ಮಾಲೀಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ  ಯಾವುದೇ ಸಾಧ್ಯತೆ ಇಲ್ಲ ಎಂದು ಬೆಂಗಳೂರು ಪೆಟ್ರೋಲ್ ಡೀಲರ್ಸ್ ಗಳ ಒಕ್ಕೂಟದ ಅಧ್ಯಕ್ಷ ಭೂಷಣ್ ನಾರಂಗ್ ಹೇಳಿದ್ದಾರೆ.

SCROLL FOR NEXT