ರಾಜ್ಯ

ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿಗೆ 100 ವರ್ಷ

Srinivas Rao BV
ಬೆಂಗಳೂರು: ಏ.10 ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಅವರ ಜನ್ಮದಿನವಾಗಿದ್ದು, ನಾಡಿನ ಹಿರಿಯ ಚೇತನ 99 ವರ್ಷಗಳನ್ನು ಪೂರೈಸಿ 100 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಭ್ರಷ್ಟಾಚಾರ ಸೇರಿದಂತೆ ನಾಡಿನ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವುದರಲ್ಲಿ ಇಂದಿಗೂ ಮುಂಚೂಣಿಯಲ್ಲಿರುವ ಹೆಚ್ ಎಸ್ ದೊರೆಸ್ವಾಮಿ ಜನಿಸಿದ್ದು ಬೆಂಗಳೂರು ಸಮೀಪದ ಹಾರೋಹಳ್ಳಿಯಲ್ಲಿ 1918 ರ ಏಪ್ರಿಲ್ 10 ರಂದು. ಹೆಚ್ ಎಸ್ ದೊರೆಸ್ವಾಮಿ ಅವರಿಗೆ ನಾಡಿನ ಹಲವು ಗಣ್ಯರು ಜನ್ಮದಿನದ ಶುಭಾಶಯ ಕೋರಿದ್ದು, ಬೆಂಗಳೂರಿನ ಮೇಯರ್ ಜಿ. ಪದ್ಮಾವತಿ, ಉಪಮೇಯರ್ ಆನಂದ್ ಅವರು ದೊರೆಸ್ವಾಮಿ ಅವರನ್ನು ಭೇಟಿ ಮಾಡಿ ಜನ್ಮದಿನದ ಶುಭಾಶಯ ಕೋರಿದ್ದಾರೆ. 
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯಿಂದ ಪ್ರಭಾವಿತರಾಗಿದ್ದ ಹೆಚ್ ಎಸ್ ದೊರೆಸ್ವಾಮಿ ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕೆ ಹೆಚ್ ಎಸ್ ದೊರೆಸ್ವಾಮಿ ಅವರನ್ನು 14 ತಿಂಗಳು ಬಂಧಿಸಲಾಗಿತ್ತು. ಬ್ರಿಟೀಷ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದ ಹೆಚ್ಎಸ್ ದೊರೆಸ್ವಾಮಿ ಅವರು ನಾಡ ಬಾಂಬ್ ಎಸೆಯುವ ಮೂಲಕ ಬ್ರಿಟೀಷ್ ಸರ್ಕಾರದ ಕಡತಗಳನ್ನು ನಾಶ ಮಾಡುತ್ತಿದ್ದರು. ಸ್ವಾತಂತ್ರ್ಯ ಹೋರಾಟವಷ್ಟೇ ಅಲ್ಲದೇ ತುರ್ತು ಪರಿಸ್ಥಿತಿ ಎದುರಾದಾಗಲೂ ದೊರೆಸ್ವಾಮಿ ಅವರನ್ನು 4 ತಿಂಗಳ ಕಾಲ ಬಂಧಿಸಲಾಗಿತ್ತು. 
SCROLL FOR NEXT