ಬೆಂಗಳೂರು: ಬೆಂಗಳೂರು ನಗರ ವಿಶ್ವದಲ್ಲಿಯೇ ಅತ್ಯಂತ ಕ್ರಿಯಾಶೀಲ ನಗರ ಎಂದು ಹೆಸರು ಗಳಿಸಿರಬಹುದು. ಆದರೆ ಇದೇ ನಗರದಲ್ಲಿ ನೂರಾರು ಮಂದಿಯನ್ನು ಸಾಗಿಸಿ ಹೊರವಲಯಗಳಲ್ಲಿರುವ ಅನೇಕ ಕಲ್ಲುಗಣಿ, ಕಾರ್ಖಾನೆಗಳಲ್ಲಿ ಅತ್ಯಂತ ಕನಿಷ್ಠ ವೇತನಕ್ಕೆ ಅಥವಾ ಯಾವುದೇ ಸೌಲಭ್ಯಗಳಿಲ್ಲದೆ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಲಾಗುತ್ತಿರುವ ಸತ್ಯ ಗಾಢ ಕತ್ತಲೆಯಂತೆ ಕಾಣುತ್ತಿದೆ.
ಉತ್ತರ ಭಾರತದ ರಾಜ್ಯಗಳಾದ ಒಡಿಶಾ, ಬಿಹಾರ, ಛತ್ತೀಸ್ ಗಢ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ, ನೇಪಾಳ ಮೊದಲಾದ ಕಡೆಗಳಿಂದ ಕಾರ್ಮಿಕರನ್ನು ಬೆಂಗಳೂರಿಗೆ ಸಾಗಿಸಿ ಅವರನ್ನು ಒತ್ತಾಯಪೂರ್ವಕವಾಗಿ ಲೈಂಗಿಕ ವ್ಯಾಪಾರ, ಭಿಕ್ಷೆ ಬೇಡುವುದು, ಅತ್ಯಂತ ಕಠಿಣ ಕೆಲಸಗಳಿಗೆ ದೂಡಲಾಗುತ್ತಿದೆ. ಇನ್ನು ಕೆಲವರನ್ನು ಮನೆಕೆಲಸಗಳಿಗೆ ಮತ್ತು ಕೃಷಿ ಕೆಲಸಗಳಿಗೆ ಹಚ್ಚಲಾಗುತ್ತಿದೆ. ತಾವಿರುವ ಪ್ರದೇಶದಲ್ಲಿ ಕೆಲಸಗಳಿಗೆ ಕೊರತೆ, ತೀವ್ರ ಬರಗಾಲದಿಂದ ಜೀವನ ನಡೆಸಲು ಸಾಧ್ಯವಾಗದೆ ಬೆಂಗಳೂರಿಗೆ ಕೆಲಸ ಹುಡಿಕಿಕೊಂಡು ಬರುವ ಜನರು ಇಲ್ಲಿ ಇನ್ನಷ್ಟು ಕಷ್ಟದ ಕೂಪಕ್ಕೆ ಬಲಿಯಾಗಬೇಕಾಗುತ್ತದೆ. ಅನೇಕ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ, ಶೋಷಣೆ ನಡೆಯುತ್ತಿವೆ. ಇಲ್ಲಿಗೆ ಬಂದ ಮೇಲೆ ಇಲ್ಲಿಯೂ ಇರಲು ಸಾಧ್ಯವಾಗದೆ, ಅತ್ತ ತಮ್ಮೂರಿಗೂ ಹೋಗಲು ಸಾಧ್ಯವಾಗದ ತ್ರಿಶಂಕು ಸ್ಥಿತಿ ಕಾರ್ಮಿಕರದ್ದು.
ಇಂಟರ್ ನ್ಯಾಷನಲ್ ಜಸ್ಟಿಸ್ ಮಿಷನ್(ಐಜೆಎಂ) ನಡೆಸಿರುವ ಅಧ್ಯಯನ ಪ್ರಕಾರ, ಜೀತ ಕಾರ್ಮಿಕರಾಗಿ ದುಡಿಯುತ್ತಿರುವವರನ್ನು ಬೇರೆ ರಾಜ್ಯಗಳಿಂದ ಕರ್ನಾಟಕ ಅದರಲ್ಲೂ ಬೆಂಗಳೂರಿಗೆ ಕಳ್ಳ ಸಾಗಣೆ ಮಾಡಲಾಗುತ್ತದೆ. ಇವರ ಜೀವನಕ್ಕೆ ಯಾವುದೇ ಭದ್ರತೆ ಅಥವಾ ಸುರಕ್ಷತೆಯಿರುವುದಿಲ್ಲ. ಬ್ಯಾಗ್, ಶೂ, ಸೋಲ್ಸ್, ಅಗರಬತ್ತಿ, ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆ ಮಾಡುವ ಘಟಕಗಳು, ಮನೆ ಕೆಲಸ, ಗಾರೆ, ಇಟ್ಟಿಗೆ ಕಾರ್ಖಾನೆಗಳು, ಕಲ್ಲುಗಣಿ ಮೊದಲಾದ ಕಡೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಇದೊಂದು ರೀತಿಯಲ್ಲಿ ಆಧುನಿಕ ಗುಲಾಮಗಿರಿ ಎನ್ನುತ್ತಾರೆ ಐಜೆಎಂನ ನಿರ್ದೇಶಕ ಈಸ್ಟರ್ ಡೇನಿಯಲ್.
ಮಾನವ ಕಳ್ಳಸಾಗಣೆ ಒಂದು ಅಪರಾಧ. ಭಾರತೀಯ ದಂಡಸಂಹಿತೆಯ ಸೆಕ್ಷನ್ 370ರಡಿ ಮಾನವ ಕಳ್ಳಸಾಗಣೆ ಆರೋಪ ಸಾಬೀತಾದರೆ ಕನಿಷ್ಠ 7 ವರ್ಷಗಳ ಶಿಕ್ಷೆಯಿದೆ. ಅದು ವಿಸ್ತರಣೆ ಕೂಡ ಆಗಬಹುದು ಎನ್ನುತ್ತಾರೆ ಈಸ್ಟರ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos