ರಾಜ್ಯ

ಕೊಳವೆ ಬಾವಿಗೆ ಬಿದ್ದಿದ್ದ ಜಮೀನು ಮಾಲೀಕ ಮತ್ತು ಮೇಸ್ತ್ರಿ ಸಾವು!

Srinivasamurthy VN

ಗದಗ: ಬೋರ್ ವೆಲ್ ರಿಪೇರಿ ಮಾಡುವಾಗ ಮಣ್ಣು ಕುಸಿದ ಪರಿಣಾಮ ಕೊಳವೆ ಬಾವಿಗೆ ಬಿದ್ದಿದ್ದ ಜಮೀನು ಮಾಲೀಕ ಮತ್ತು ಮೇಸ್ತ್ರಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸವಡಿ ಗ್ರಾಮದಲ್ಲಿನ ಜಾಮೀನುವೊಂದರಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿ ಬತ್ತಿಹೋಗಿದ್ದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ರೀ ಬೋರಿಂಗ್ ಮಾಡುವ ಕಾರ್ಯ ನಡೆದಿತ್ತು. ಅದರಂತೆ  ಇಂದು ರೀ ಬೋರಿಂಗ್ ಕಾರ್ಯ ಮುಂದುವರೆಸುತ್ತಿದ್ದಾಗ ಮಣ್ಣು ಕುಸಿದು ಕೆಲಸ ಮಾಡುತ್ತಿದ್ದ ಬಸವರಾಜ್ ಮತ್ತು ಶಂಕರಪ್ಪ ಎಂಬ ಇಬ್ಬರು ಕೊಳವೆ ಬಾವಿಯೊಳಗೆ ಬಿದ್ದಿದ್ದಾರೆ. ಅವರ ಮೇಲೆ ಸುಮಾರು 20 ಅಡಿಗಳಷ್ಟು ಮಣ್ಣು  ಕುಸಿದಿದ್ದು, ಉಸಿರಾಟದ ತೊಂದರೆಯಿಂದಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಪ್ರಸ್ತುತ ಕಾರ್ಯಾಚರಣೆ ನಡೆಸಿರುವ ಅಗ್ನಿಶಾಮಕ ಸಿಬ್ಬಂದಿಗಳು ಇಬ್ಬರ ದೇಹವನ್ನು ಹೊರತೆಗೆದಿದ್ದು, ಇಬ್ಬರ ಸಾವನ್ನು ಖಚಿತಪಡಿಸಿದ್ದಾರೆ. ಸ್ಥಳೀಯರು ತಿಳಿಸಿರುವಂತೆ ಕೊಳವೆ ಬಾವಿಯೊಳಗೆ ಬಿದ್ದ ಶಂಕ್ರಪ್ಪನೇ ಜಮೀನಿನ  ಮಾಲಿಕನಾಗಿದ್ದು, ಆತನೊಂದಿಗೆ ಮೇಸ್ತ್ರಿ ಬಸವರಾಜು ಎಂಬಾತ ಕೂಡ ಕೊಳವೆ ಬಾವಿಯೊಳಗೆ ಬಿದ್ದಿದ್ದ.

ಅಂತ್ಯಸಂಸ್ಕಾರಕ್ಕೆ ಜಿಲ್ಲಾಡಳಿತದ ನೆರವು
ಇನ್ನು ಮೃತರ ಕುಟುಂಬಕ್ಕೆ ಗದಗ ಜಿಲ್ಲಾಡಳಿತ ಪರಿಹಾರ ಘೋಷಣೆ ಮಾಡಿದ್ದು, ಮೃತರ ಕುಟುಂಬಕ್ಕೆ ತಲಾ 20 ಸಾವಿರ ರು.ಹಾಗೂ ಅಂತ್ಯ ಸಂಸ್ಕಾರಕ್ಕೆ 5 ಸಾವಿರ ರು.ಗಳನ್ನು ನೀಡುವುದಾಗಿ ತಹಶೀಲ್ದಾರ್ ಶಿವಲಿಂಗ ಪ್ರಭು ಅವರು  ತಿಳಿಸಿದ್ದಾರೆ.

SCROLL FOR NEXT