ಬೆಂಗಳೂರು: ನಗರದಲ್ಲಿನ ಮರಗಳ ಕಡಿತದ ಸಂಬಂಧ ನಡೆದ ವಿಚಾರಣೆಯಲ್ಲಿ ಬಿಡಿಎ ಹಾಗೂ ಬಿಬಿಎಂಪಿಯ ಯಾವುದೇ ಅಧಿಕಾರಿಗಳು ಹಾಜರಾಗದ ಹಿನ್ನಲೆಯಲ್ಲಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ನ್ಯಾ,ಪಿ ವಿಶ್ವನಾಥ್ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಾಹಿರಾತು ಫಲಕಗಳಿಗಾಗಿ ಮರದ ಅಕ್ಕಪಕ್ಕದ ಮರಗಳನ್ನು ಕಡಿಯುತ್ತಿರುವ ಕ್ರಮದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಲೋಕಾಯುಕ್ತ ನ್ಯಾ ಪಿ ವಿಶ್ವನಾಥ್ ಶೆಟ್ಟಿ ಅವರು ಗುರುವಾರ ನಡೆಸಿದರು. ವಿಚಾರಣೆಗೆ ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳ ಗೈರು ಹಾಜರಾತಿ ಗಮನಿಸಿದ ನ್ಯಾಯಮೂರ್ತಿ ಪಿ ವಿಶ್ವನಾಥ್ ಶೆಟ್ಟಿ ಅವರು, ಮರಗಳ ಕಡಿತ ಪ್ರಕರಣದಲ್ಲಿ ಅಧಿಕಾರಿಗಳು ಯಾವುದೇ ರೀತಿಯ ನಿರ್ಲಕ್ಷ್ಯ ತೋರುವಂತಿಲ್ಲ. ಒಂದು ವೇಳೆ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದರೆ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಸೆಕ್ಷನ್ 3 (10) ಅಡಿಯಲ್ಲಿ ದುರಾಡಳಿತ ಎಂದು ಪರಿಗಣಿಸಲಾಗುತ್ತದೆ. ಮರಕಡಿಯುವುದರ ವಿರುದ್ಧದ ಸಾರ್ವಜನಿಕರ ಧ್ವನಿಯನ್ನು ಮೌನವಾಗಿರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಇದೇ ಪ್ರಕರಣ ಸಂಬಂಧ ಪಿ ವಿಶ್ವನಾಥ್ ಶೆಟ್ಟಿ ಅವರು ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ವಿಚಾರಣಗೆ ಹಾಜರಾಗುವಂತೆ ಮಾರ್ಚ್ 13ರಂದು ನೋಟಿಸ್ ನೀಡಿದ್ದರು. ನ್ಯಾಯಮೂರ್ತಿಗಳ ನೋಟಿಸ್ ಹೊರತಾಗಿಯೂ ಅಧಿಕಾರಿಗಳ ಗೈರು ಹಾಜರಿ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಗುರುವಾರ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಮತ್ತೊಂದು ಅವಕಾಶ ನೀಡಿರುವ ನ್ಯಾಯಮೂರ್ತಿಗಳು ಮುಂದಿನ ವಿಚಾರಣೆ ವೇಳೆ ಅಧಿಕಾರಿಗಳು ಸಂಬಂಧ ದಾಖಲೆಗಳೊಂದಿಗೆ ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ.
ಮಾರತ್ ಹಳ್ಳಿಯ ಕಳಾಮಂದಿರ್ ಸಮೀಪದ ಹೋರ್ಡಿಂಗ್ಸ್ ದಾರಿಹೋಕರಿಗೆ ಕಾಣಿಸುತ್ತಿಲ್ಲ ಎಂಬ ಕಾರಣಕ್ಕೆ ಅಲ್ಲಿನ ಮೂರು ಮರಗಳಿಗೆ ಆ್ಯಸಿಡ್ ಹಾಕಿ ಅವುಗಳು ಬೆಳೆಯದಂತೆ ನಾಶಪಡಿಸಲಾಗಿತ್ತು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.