ಮೈಸೂರು: ಕಾವೇರಿ ನದಿ ಒಣಗಿ ಹೋಗಿ 20 ದಿನಗಳೇ ಕಳೆದಿವೆ. ನದಿಯಲ್ಲಿ ನೀರು ಕಾರಣ ಮಲೈ ಮಹಾದೇಶ್ವರ ಬೆಟ್ಟಕ್ಕೆ ಬರುತ್ತಿರುವ ಭಕ್ತಾದಿಗಳ ಪಾಡು ಹೇಳ ತೀರದಂತಾಗಿದೆ.
ಕರ್ನಾಟಕ, ತಮಿಳುನಾಡಿನಿಂದ ಆಗಮಿಸುವ ಭಕ್ತರ ಉಳಿದುಕೊಳ್ಳುತ್ತಿದ್ದ ವಸತಿ ಗೃಹ ಹಾಗೂ ಅತಿಥಿ ಗೃಹಗಳು ನೀರಿಲ್ಲದೇ ಮುಚ್ಚಿವೆ.
ದೇವಾಲಯಕ್ಕೆ ಬರುವ ಭಕ್ತರ ಅವಶ್ಯಕತೆ ಪೂರೈಸಲು ಅಲ್ಲಿನ ಸಂಪ್ ಗಳಲ್ಲಿ ನೀರು ಖಾಲಿಯಾಗಿದೆ, ಕಳೆದ ಒಂದು ತಿಂಗಳಿಂದ ನೀರಿನ ಬವಣೆ ತಲೆದೋರಿದೆ. ಇದು ಜಿಲ್ಲಾಡಳಿತಕ್ಕೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಬೆಟ್ಟದ ಮೇಲಿರುವ ಬೋರ್ ವೆಲ್ ಗಳಲ್ಲಿ ಒಂದು ಹನಿ ನೀರು ಕೂಡ ಬರುತ್ತಿಲ್ಲ, ದೇವಾಲಯಕ್ಕೆ ಬರುವ ಗಣ್ಯರಿಗೆ ಬಕೆಟ್ ನಲ್ಲಿ ನೀರು ನೀಡಲಾಗುತ್ತಿದೆ. ನೀರಿಲ್ಲದ ಕಾರಣ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಚಗೊಳಿಸಲಾಗಲಿಲ್ಲ. ಹೀಗಾಗಿ ಹಲವರು ಬಯಲಲ್ಲೇ ಶೌಟ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಕೇಂದ್ರದ ಸಹಯೋಗದೊಂದಿಗೆ 90 ಲಕ್ಷ ಲೀಟರ್ ನೀರು ಸಂಗ್ರಹಿಸುವ ಕಾವೇರಿ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿ ಪೂರ್ಣಗೊಳಿಸಿದೆ, 23 ಕಿಮೀ ಉದ್ದದ ಪೈಪ್ ಲೈನ್ ನ ಮೂಲಕ ಮೂರು ಪಂಪಿಂಗ್ ಸ್ಟೇಶನ್ ಗಳಿಂದ ಟ್ಯಾಂಕ್ ಗೆ ನೀರನ್ನು ಪೂರೈಸಬೇಕಾಗಿತ್ತು. ಆದರೇ ಕಾವೇರಿ ನದಿಯಲ್ಲೇ ನೀರು ಬತ್ತಿ ಹೊಗಿರುವ ಕಾರಣ ಕಳೆದ 23 ದಿನಗಳಿಂದ ನೀರನ್ನು ಟ್ಯಾಂಕ್ ಗೆ ಪಂಪ್ ಮಾಡಲಾಗಿಲ್ಲ, ಬೆಟ್ಟದ ಮೇಲಿರುವ ರಾಷ್ಟ್ರಪತಿ ಅತಿಥಿ ಗೃಹ ಕೂಡ ನೀರಿಲ್ಲದೇ ಬಂದ್ ಆಗಿದೆ.
ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ವೇಳೆ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ, ಇವರಿಗೆಲ್ಲಾ ನೀರು ಪೂರೈಸವುದು,ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಗೆಸ್ಟ್ ಹೌಸ್ ಮ್ಯಾನೇಜರ್ ಬಸವಣ್ಣ ಹೇಳುತ್ತಾರೆ.
ದೇವಾಲಯದ ಆವರಣದಲ್ಲಿರುವ ದಾಸೋಹ ಭವನದಲ್ಲಿ ಭಕ್ತರಿಗೆ ಉಚಿತ ಪ್ರಸಾದ ನೀಡಲಾಗುತ್ತದೆ. ಇಲ್ಲಿರುವ 2 ಬೋರ್ ವೆಲ್ ಗಳು ಮಾತ್ರ ಕೆಲಸ ನಿರ್ವಹಿಸುತ್ತಿವೆ. ಒಂದು ವೇಳೆ ಈ ಬೋರ್ ವೆಲ್ ಗಳು ಬರಿದಾದರೆ ಅಡುಗೆ ಮಾಡಲು ಕೂಡ ಬಹಳ ಕಷ್ಟವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ನೂ ಬೆಟ್ಟದ ಮೇಲಿರುವ ಹೊಟೆಲ್ ಗಳ ಪಾಡು ಹೇಳ ತೀರದಾಗಿದೆ, ಹೋಟೆಲ್ ಮಾಲೀಕರು ಪ್ರತಿ ಟ್ಯಾಂಕರ್ ಗೆ 3ರಿಂದ 4 ಸಾವಿರ ರು ಹಣ ನೀಡಿ ನೀರು ಖರೀದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಬಾರದೇ ಇದ್ದರೇ ಹೋಟೆಲ್ ಮುಚ್ಚಲು ಮಾಲಿಕರು ನಿರ್ಧರಿಸಿದ್ದಾರೆ.