ಸದಾಶಿವನಗರದಲ್ಲಿರುವ ನಿವಾಸದಲ್ಲಿ ಡಿ.ಕೆ ಶಿವಕುಮಾರ್
ಬೆಂಗಳೂರು: ಇಂಧನ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಐಟಿ ದಾಳಿ ಗುರುವಾರವೂ ಮುಂದುವರಿದಿದ್ದೂ, ಡಿಕೆಶಿ ಮಾವನೆ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಮನೆ ಹಾಗೂ ಗುಜರಾತ್ ಕಾಂಗ್ರೆಸ್ ಶಾಸಕರು ತಂಗಿದ್ದ ಈಗಲ್ ಟನ್ ರೆಸಾರ್ಟ್ ಸೇರಿದಂತೆ ಡಿ.ಕೆ ಶಿವಕುಮಾರ್ ಗೆ ಸೇರಿದ ಹಲವು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆದಿತ್ತು.
ಡಿ.ಕೆ ಶಿವಕುಮಾರ್, ಆಪ್ತರು ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಮೈಸೂರಿನಲ್ಲಿ ಡಿ.ಕೆ. ಶಿವಕುಮಾರ್ ಮಾವ ತಿಮ್ಮಯ್ಯ ಅವರ ಮನೆಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ಸಂಜೆ 6.30 ರ ವೇಳೆಗೆ ಖಾಸಗಿ ವಾಹನಗಳಲ್ಲಿ ಆಗಮಿಸಿದ ಅಧಿಕಾರಿಗಳು, ಶಿವಕುಮಾರ್ ಸಂಬಂಧಿಗಳು ವಾಸವಿರುವ ಮೈಸೂರಿನ ದಟ್ಟಗಳ್ಳಿ, ಮತ್ತು ಟಿ.ಕೆ ಲೇಔಟ್ ಗಳಲ್ಲಿ ಪರಿಶೀಲನೆ ನಡೆಸಿದರು.
ಶಿವಕುಮಾರ್ ಮಾವ ತಿಮ್ಮಯ್ಯ ವಾಸವಿರುವ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ರಾತ್ರಿಯವರೆಗೂ ಪರಿಶೀಲನೆ ನಡೆಸಿದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಸತಿವರ ಸಂಬಂಧಿಗಳನ್ನು ಮನೆಯ ಒಳಗೆ ಬಿಡಲು ಅಧಿಕಾರಿಗಳು ನಿರಾಕರಿಸಿದರು.
ತಿಮ್ಮಯ್ಯ ಮತ್ತು ಅವರ ಮನೆಯ ಸದಸ್ಯರನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದರು. ಜೊತೆಗೆ ಹೆಚ್ಚಿನ ತನಿಖೆಗಾಗಿ ತಿಮ್ಮಯ್ಯ ಅವರನ್ನು ಅವರ ಕಾರ್ಖಾನೆ ಬಳಿ ಕರೆದೊಯ್ಯಲಾಗಿತ್ತು. ನಂತರ ಅವರನ್ನು ವಾಪಸ್ ಮನೆಗೆ ಕರೆದಂತು ಬಿಡಲಾಯಿತು. ನನಗೆ ಅಧಿಕಾರಿಗಳು ಕಿರುಕುಳ ಅಥವಾ ತೊಂದರೆ ನೀಡಿಲ್ಲ ಎಂದು ತಿಮ್ಮಯ್ಯ ಹೇಳಿದ್ದಾರೆ. ದ್ವೇಷಕ್ಕಾಗಿ ಮಾಡಿರುವ ಪಿತೂರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ತಿಮ್ಮಯ್ಯ, ಅವರಿಗೆ ಏನು ಬೇಕೋ ಅದನ್ನು ಮಾಡಲಿ, ಅದರ ಬಗ್ಗೆ ನಮಗೆ ಚಿಂತೆಯಿಲ್ಲ, ಇಲ್ಲಿ ಮುಚ್ಚು ಮರೆಮಾಡುವಂತಹದ್ದು ಏನು ಇಲ್ಲ ಎಂದು ತಿಮ್ಮಯ್ಯ ಪ್ರತಿಕ್ರಿಯಿಸಿದರು.
ಇನ್ನು ಡಿ.ಕೆ ಶಿವಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ಹಿನ್ನೆಲೆಯಲ್ಲಿ ಮಂಗಳೂರಿನ ತೆರಿಗೆ ಇಲಾಖೆ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಯೂಥ್ ಕಾಂಗ್ರೆಸ್ ಸದಸ್ಯರು ಐಟಿ ದಾಳಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಆದಾಯ ತೆರಿಗೆ ಇಲಾಖೆ ಕಚೇರಿ ಬಳಿ ಆಗಮಿಸಿದ ಪ್ರತಿಭಟನಾಕರರು ಅತ್ತಾವರ್ ನಲ್ಲಿರುವ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಕಚೇರಿಯ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ.
ಇನ್ನೂ ಹಾಸನದಲ್ಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಜಿ ಸಚಿವ ಬಿ. ಶಿವರಾಂ ಅವರ ಸಂಬಂಧಿ ಸಚಿನ್ ಅವರಿಗೆ ಸೇರಿದ ಬಿ.ಎಂ ರಸ್ತೆಯಲ್ಲಿರುವ ತ್ರಿಸ್ಟಾರ್ ಹೋಟೆಲ್ ಮತ್ತು ಕಾರ್ಖಾನೆಗಳ ಮೇಲೂ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಜೊತೆಗೆ ಬೆಂಗಳೂರಿನ ನಿವಾಸದಲ್ಲೂ ದಾಳಿ ನಜೆಸಿ ರಿಯಲ್ ಎಸ್ಟೇಟ್ ಕಂಪನಿಗೆ ಸೇರಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿ.ಕೆ.ಶಿವಕುಮಾರ್ ಅವರ ಆಪ್ತ ಜೋತಿಷಿ ದ್ವಾರಕನಾಥ್ ಗೂರೂಜಿ ಅವರ ನಿವಾಸದ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ.