ಬೆಂಗಳೂರು: ಶಿವಾನಂದ ವೃತ್ತದ ಹರೆ ಕೃಷ್ಣ ರಸ್ತೆಯಲ್ಲಿ ಉದ್ದೇಶಿತ ಸ್ಟೀಲ್ ಮೇಲ್ಸೇತುವೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಹೈಕೋರ್ಟ್ ನಿನ್ನೆ ವಜಾಗೊಳಿಸಿತು.
ಮುಖ್ಯ ನ್ಯಾಯಮೂರ್ತಿ ಸುಬ್ರೊ ಕಮಲ್ ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಅರ್ಜಿದಾರರಿಗೆ ವಿವರವಾದ ಪ್ರಾತಿನಿಧ್ಯವನ್ನು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸುವಂತೆ ಹೇಳಿದ್ದಾರೆ.
ಇಂತಹ ಪ್ರಾತಿನಿಧ್ಯವನ್ನು ಸಲ್ಲಿಸಿದರೆ ಅರ್ಜಿದಾರರ ಅಭಿಪ್ರಾಯವನ್ನು ಪಡೆದುಕೊಂಡು ಎರಡು ತಿಂಗಳೊಳಗೆ ವಿಲೇವಾರಿ ಮಾಡುವಂತೆ ವಿಭಾಗೀಯ ಪೀಠ ಪ್ರಧಾನ ಕಾರ್ಯದರ್ಶಿಗೆ ತಿಳಿಸಿದೆ.
ಜೂನ್ 24ರಂದು ಸರ್ಕಾರ ಅನುಮತಿ ನೀಡಿ ಹೊರಡಿಸಿದ್ದ ಸ್ಟೀಲ್ ಮೇಲ್ಸೇತುವೆ ನಿರ್ಮಾಣವನ್ನು ಪ್ರಶ್ನಿಸಿ ಶಿವಾನಂದ ವೃತ್ತದ ಬಳಿಯ ನಿವಾಸಿಗಳಾದ ಕೆ.ಎಸ್.ಪ್ರಸಾದ್ ಮತ್ತು ಇತರ 24 ಮಂದಿ ಹಾಗೂ ಸುತ್ತಮುತ್ತಲ ವಾಣಿಜ್ಯ ಮಳಿಗೆಗಳ ಮಾಲಿಕರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದು ಕಾನೂನಿಗೆ ವಿರೋಧವಾಗಿದೆ ಎಂದು ಹೇಳಿದ್ದರು.